ADVERTISEMENT

ಸರ್ಕಾರ– ವೈದ್ಯರ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹಿಸಿ ತಮಟೆ ಚಳವಳಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:22 IST
Last Updated 17 ನವೆಂಬರ್ 2017, 9:22 IST

ಚಾಮರಾಜನಗರ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಜಾರಿ ಸಂಬಂಧ ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಸಮಾವೇಶಗೊಂಡ ಕಾರ್ಯಕರ್ತರು, ರಾಜ್ಯ ಹಾಗೂ ಖಾಸಗಿ ವೈದ್ಯರ ನಿಲುವನ್ನು ತೀವ್ರವಾಗಿ ಖಂಡಿಸಿ ಘೋಷಣೆಗಳನ್ನು ಕೂಗಿದರು.

ಮಸೂದೆ ವಿಚಾರವಾಗಿ ನಡೆಯುತ್ತಿ ರುವ ಜಟಾಪಟಿಯಲ್ಲಿ ಈಗಾಗಲೇ 22 ಮಂದಿ ಜೀವ ಕಳೆದುಕೊಂಡಿದ್ದಾರೆ. ವೈದ್ಯರು ತಮ್ಮ ಕರ್ತವ್ಯ ಮರೆತು ಜೀವಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ರಾಜ್ಯ ಸರ್ಕಾರವೂ ವೈದ್ಯರ ಸಮಸ್ಯೆ ಬಗೆಹರಿ ಸುವಲ್ಲಿ ಮೀನಮೇಷ ಎಣಿಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಜನರ ಹಿತದೃಷ್ಟಿಯಿಂದ ಸಮಸ್ಯೆಗಳನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ಸಮಸ್ಯೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ, ಖಾಲಿಯಿರುವ ತಜ್ಞ ವೈದ್ಯರನ್ನು ತಕ್ಷಣ ನೇಮಕ ಮಾಡಬೇಕು. ಸರ್ಕಾರಿ ಆಸ್ಪತ್ರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಹ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಿದರು.\ ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಚಾ.ಗು. ನಾಗರಾಜು, ಬಿ.ಬಸವರಾಜು, ರಮೇಶ್‌ ಕಾರ್ಮಿಕ, ಆಲೂರು ನಾಗೇಂದ್ರ, ಟೈಲರ್‌ ನಟರಾಜು, ವೀರಭದ್ರ, ತಾಂಡವಮೂರ್ತಿ, ಎನ್. ಸತೀಶ್, ರಾಜಶೇಖರ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.