ADVERTISEMENT

ಹಣ್ಣುಗಳ ರಾಜನ ಆಗಮನ; ಬೆಲೆ ದುಬಾರಿ

ಭಾನುವಾರ ಬೀಸಿದ ಬಿರುಗಾಳಿಗೆ ಉದುರಿದ ಮಾವಿನಕಾಯಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 8:52 IST
Last Updated 24 ಏಪ್ರಿಲ್ 2018, 8:52 IST
ಚಾಮರಾಜೇಶ್ವರ ದೇವಸ್ಥಾನದಿಂದ ಭುವನೇಶ್ವರಿ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಸೋಮವಾರ ಮಾವಿನಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು
ಚಾಮರಾಜೇಶ್ವರ ದೇವಸ್ಥಾನದಿಂದ ಭುವನೇಶ್ವರಿ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಸೋಮವಾರ ಮಾವಿನಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು   

ಚಾಮರಾಜನಗರ: ನಗರದ ಮಾರುಕಟ್ಟೆಗೆ ಈ ವಾರ ಮಾವಿನಹಣ್ಣಿನ ಆವಕವಾಗಿದ್ದು, ಬೆಲೆ ಮಾತ್ರ ದುಬಾರಿಯಾಗಿದೆ. ‌

ಭಾನುವಾರ ಹಾಗೂ ಇತ್ತೀಚೆಗೆ ಬೀಸಿದ ಬಿರುಗಾಳಿಗೆ ಜಿಲ್ಲೆಯ ಹಲವೆಡೆ ಮಾವಿನಕಾಯಿಗಳು ಉದುರಿ ಹೋಗಿದ್ದು, ರೈತರಿಗೆ ನಷ್ಟ ಉಂಟಾಗಿದೆ. ಇದರಿಂದ ಈ ಬಾರಿ ಜಿಲ್ಲೆಯಿಂದ ಮಾವಿನಹಣ್ಣುಗಳು ಹೆಚ್ಚಾಗಿ ಆವಕವಾಗುವುದು ಅನುಮಾನ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಮೈಸೂರು ಹಾಗೂ ಬೆಂಗಳೂರು ಮಾರುಕಟ್ಟೆಗಳಲ್ಲಿ ಈಗಾಗಲೇ ಮಾವಿನಹಣ್ಣುಗಳು ಸಿಗುತ್ತಿವೆ. ನಗರದ ವ್ಯಾಪಾರಿಗಳು ಮೈಸೂರು ಹಾಗೂ ಬೆಂಗಳೂರಿನಿಂದ ಖರೀದಿಸಿ ಮಾರಾಟ ಮಾಡುತ್ತಾರೆ. ಒಂದು ವಾರದಲ್ಲಿ ಸುಮಾರು 1 ಟನ್‌ನಷ್ಟು ಮಾವಿನಹಣ್ಣು ನಗರಕ್ಕೆ ಬಂದಿವೆ.

ADVERTISEMENT

ಚಾಮರಾಜೇಶ್ವರ ದೇಗುಲದ ಬಳಿ, ಮಾರುಕಟ್ಟೆ ಸುತ್ತಮುತ್ತ, ಪ್ರಮುಖ ಹಣ್ಣಿನ ಮಳಿಗೆಗಳಲ್ಲಿ ಮಾವು ಸಿಗುತ್ತಿದೆ. ಸದ್ಯ, ಬಾದಾಮಿ ಕೆ.ಜಿಗೆ ₹ 160, ರಸಪೂರಿ ₹ 140, ಸೇಂದೂರ ₹ 120, ತೋತಾಪುರಿ ಮಾವಿನಕಾಯಿ ₹ 80ಕ್ಕೆ ಮಾರಾಟವಾಗುತ್ತಿದೆ.

ಇನ್ನೊಂದು ವಾರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮಗಳಲ್ಲಿರುವ ಮಾವಿನಮರಗಳು ಫಲ ಕೊಡಲು ಆರಂಭಿಸುತ್ತಿದ್ದಂತೆ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಣ್ಣಿನ ವ್ಯಾಪಾರಿ ಚಂದ್ರು, ‘ಸದ್ಯ ಹೊರ ಜಿಲ್ಲೆಗಳಿಂದ ಮಾವು ಬರುತ್ತಿದೆ. ನ‌ಮ್ಮ ಜಿಲ್ಲೆಯ ಮಾವು ಬಂದ ಬಳಿಕ ಬೆಲೆ ತಗ್ಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಇಳುವರಿ ಕಡಿಮೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.