ADVERTISEMENT

₹15 ಲಕ್ಷ ಮೌಲ್ಯದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 10:37 IST
Last Updated 7 ಜುಲೈ 2017, 10:37 IST

ಚಾಮರಾಜನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸರಗಳ್ಳಿಯರು ಸೇರಿದಂತೆ ಐವರು ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಅವರಿಂದ ಒಟ್ಟು ₹15.74 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಗುರುವಾರ ವಶಪಡಿಸಿ ಕೊಂಡಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ನಡೆದ ಒಟ್ಟು 27 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೂವರು ಸರಗಳ್ಳಿಯರ ಸೆರೆ: ಮಲೆಮಹದೇಶ್ವರ ಬೆಟ್ಟ ಮತ್ತು ಕೊಳ್ಳೇಗಾಲ ಪೊಲೀಸ್‌ ಠಾಣೆಯ ವ್ಯಾಪ್ತಿಗಳಲ್ಲಿ ನಡೆದ ಸರಗಳವು ಪ್ರಕರಣ ಸಂಬಂಧ ಮೂವರು ಮಹಿಳೆಯರನ್ನು ಬಂಧಿಸಿದ್ದು, ₹10.74 ಲಕ್ಷ ಮೌಲ್ಯದ 517 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಮೈಸೂರಿನ ವಿಜಯನಗರದ ವಸಂತ ಅಲಿಯಾಸ್‌ ಗೀತಾ (50), ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರತ್ನಾ ಅಲಿಯಾಸ್‌ ಸವಿತಾ (35)  ಗುಂಡ್ಲುಪೇಟೆ ತಾಲ್ಲೂಕಿನ ಜ್ಯೋತಿ ಅಲಿಯಾಸ್‌ ರಮ್ಯಾ (37) ಬಂಧಿತರು. ಆರೋಪಿಗಳ ಬಂಧನದಿಂದ ಒಟ್ಟು 19 ಸರಗಳವು ಪ್ರಕರಣ ಪತ್ತೆಯಾಗಿವೆ.

ADVERTISEMENT

ಬಂಧಿತರು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ, ದೀಪಾವಳಿ ಮತ್ತು ಯುಗಾದಿ ಹಬ್ಬದಂತಹ ಜನದಟ್ಟಣೆ ಹೆಚ್ಚಿರುವ ಸಂದರ್ಭಗಳನ್ನು ಬಳಸಿ ಕೊಂಡು ಮಹಿಳೆಯರ ಸರಗಳನ್ನು ಕದಿಯುತ್ತಿದ್ದರು. ಚಾಮರಾಜನಗರದಲ್ಲಿ ಸಹ ಕೃತ್ಯ ಮಾಡಿರುವುದು ಪತ್ತೆಯಾಗಿದೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ: ಸಂತೇಮರಹಳ್ಳಿಯ ದೊಡ್ಡ ಅಡ್ಡಹಳ್ಳದ ಬಳಿ ಒಂಟಿ ಮಹಿಳೆಯಿಂದ ಮೊಬೈಲ್‌ ಕಸಿದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಮೇಗಲಹುಂಡಿ ಗ್ರಾಮದ ಸುರೇಶ (20) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಪಟ್ಟಣದಲ್ಲಿ ಬೈಕ್‌ ಕದ್ದು ತೆರಳುತ್ತಿದ್ದ. ದಾರಿ ನಡುವೆ ಎದುರಾದ ಮಹಿಳೆಯನ್ನು ಪಕ್ಕದ ಜಮೀನಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಕೂಗಿಕೊಂಡಾಗ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ಎಸ್‌ಪಿ ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‌ಪಿ ಎಸ್. ಈ. ಗಂಗಾಧರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.