ADVERTISEMENT

40 ಸಾವಿರ ಟನ್‌ ಆಹಾರ ಸೋರಿಕೆಗೆ ತಡೆ

ಕ್ಷಮೆ ಕೇಳುವುದಿಲ್ಲ: ಆಹಾರ ಸಚಿವ ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 8:48 IST
Last Updated 2 ಮಾರ್ಚ್ 2017, 8:48 IST

ಚಾಮರಾಜನಗರ: ‘ರಾಜ್ಯದಲ್ಲಿ ಪ್ರತಿ ತಿಂಗಳು 40 ಸಾವಿರ ಮೆಟ್ರಿಕ್‌ ಟನ್‌ ಆಹಾರ ಸೋರಿಕೆಯಾಗುತ್ತಿತ್ತು. ಪಡಿತರ ವಿತರಣೆಯಲ್ಲಿ ಕೂಪನ್‌ ಪದ್ಧತಿ ಅಳವಡಿಕೆ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಪರಿಣಾಮ ಈ ಸೋರಿಕೆಗೆ ಕಡಿವಾಣ ಬಿದ್ದಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಇಲ್ಲಿ ಬುಧವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಜೂನ್‌ ಅಂತ್ಯದೊಳಗೆ ಪಡಿತರ ಚೀಟಿಗಳಿಗೆ ಆಧಾರ್‌ ಸಂಖ್ಯೆ ಜೋಡಣೆಗೆ ಗಡುವು ನೀಡಿದೆ. ಎಲ್ಲ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್‌ ಜೋಡಣೆ ಮಾಡಿಕೊಳ್ಳಬೇಕು ಎಂದರು.

ಹಂತ ಹಂತವಾಗಿ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್‌ ಪದ್ಧತಿ ಜಾರಿಗೊಳ್ಳಲಿದೆ. ಹೊಸದಾಗಿ ಪಡಿತರ ಚೀಟಿ ಪಡೆಯುವವರ ಸಮಸ್ಯೆ ಆಲಿಸಲು ಸೇವಾ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಕ್ಷಮೆ ಕೇಳುವುದಿಲ್ಲ: ‘ಮಂಗಳೂರಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ನೀಡಿದ್ದ ವೇಳೆ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು ತಪ್ಪು. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಈ ನೋವಿನಿಂದ ನಾನು ಮಾತನಾಡುತ್ತಿದ್ದ ವೇಳೆ ಬಾಯಿತಪ್ಪಿ ಕೆಟ್ಟಪದ ಬಳಸಿದೆ. ಈ ಬಗ್ಗೆ ವಿಷಾದವಿದೆ. ಆದರೆ, ಕ್ಷಮೆ ಕೇಳುವುದಿಲ್ಲ’ ಎಂದು ಖಾದರ್‌ ಹೇಳಿದರು. ‘ನಾನು ಯಾರಿಗೂ ಅವಮಾನ, ನೋವು ಉಂಟು ಮಾಡಲು ಈ ಹೇಳಿಕೆ ನೀಡಿಲ್ಲ’ ಎಂದರು.

ಭಾರತಕ್ಕೆ ಪಾಕಿಸ್ತಾನದ ಪ್ರಧಾನಿ ಭೇಟಿ ನೀಡಿದಾಗ ಯಾರೊಬ್ಬರು ವಿರೋಧಿಸಿಲ್ಲ. ಬಿಲ್ಲವ ಸಮುದಾಯದ ಮುಖ್ಯಮಂತ್ರಿ ಮಂಗಳೂರಿಗೆ ಬಂದಾಗ ವಿರೋಧಿಸಿ ಬಂದ್ ನಡೆಸಿದ್ದಾರೆ. ಬಸ್‌ಗೆ ಕಲ್ಲು ತೂರಾಟ ನಡೆಸಲಾಗಿದೆ. ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಅರಿವು ಬಂದ್‌ಗೆ ಕರೆ ನೀಡಿದವರಿಗೆ ಇಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.