ADVERTISEMENT

ಆಮಿಷಕ್ಕೆ ಬಲಿಯಾಗದೆ ನೈತಿಕ ಪ್ರಜ್ಞೆ ತೋರಿಸಿ

ಮತದಾನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ ಗುರುದತ್ ಹೆಗಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 11:17 IST
Last Updated 4 ಏಪ್ರಿಲ್ 2018, 11:17 IST
ಚಿಕ್ಕಬಳ್ಳಾಪುರದ ನಂದಿ ರಸ್ತೆಯಲ್ಲಿರುವ ಷೆಲ್ ಅಪರೆಲ್ಸ್ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಕಾರ್ಮಿಕರು ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಚಿಕ್ಕಬಳ್ಳಾಪುರದ ನಂದಿ ರಸ್ತೆಯಲ್ಲಿರುವ ಷೆಲ್ ಅಪರೆಲ್ಸ್ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಕಾರ್ಮಿಕರು ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.   

ಚಿಕ್ಕಬಳ್ಳಾಪುರ:  ಮತದಾರರು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒಡ್ಡುವ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಮಗೆ ಅರ್ಹ ಎನಿಸುವ ವ್ಯಕ್ತಿಗೆ ನೈತಿಕ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ತಿಳಿಸಿದರು.ನಗರದ ನಂದಿ ರಸ್ತೆಯಲ್ಲಿರುವ ಷೆಲ್ ಅಪರೆಲ್ಸ್ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮತದಾರರು ಯಾರ ಆಮಿಷ, ಬೆದರಿಕೆಗೆ ಮಣಿಯದೇ ನಿರ್ಭೀತಿಯಿಂದ ಯೋಗ್ಯ ಮತ್ತು ಪ್ರಾಮಾಣಿಕ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಚುನಾವಣೆ ಅಥವಾ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬಹುದು ಎಂದರು.

ಜನವರಿ 1ಕ್ಕೆ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಸಬೇಕು. ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿರುವವರು ಸಮೀಪದ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯುನ್ಮಾನ ಮತ ಯಂತ್ರ ಹಾಗೂ ಮತ ಖಾತರಿ ಯಂತ್ರಗಳ ಬಳಕೆ ಮತ್ತು ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ಅರಿವು ಮೂಡಿಸಿ ಕರ ಪತ್ರಗಳನ್ನು ವಿತರಿಸಲಾಯಿತು.

ADVERTISEMENT

ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ, ಕಾರ್ಖಾನೆಯ ವ್ಯವಸ್ಥಾಪಕ ಮುನಿರಾಜು, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಸ್ವೀಪ್ ಸಮಿತಿಯ ರವಿಕುಮಾರ್, ಉಪನ್ಯಾಸಕರಾದ ಸತೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.