ADVERTISEMENT

ಇತಿಹಾಸ ವಿಕೃತಿ ತಡೆ ಅಗತ್ಯ

ಬಿ.ಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಬೊಮ್ಮೆಕಲ್‌ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:35 IST
Last Updated 25 ಏಪ್ರಿಲ್ 2018, 8:35 IST

ಚಿಂತಾಮಣಿ: ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಇತಿಹಾಸದ ವಿಕೃತಿ ಮಾಡುವುದು ನಿಲ್ಲಿಸಬೇಕು ಹಾಗೂ ಪಠ್ಯವನ್ನು ಪರಿಷ್ಕೃತಗೊಳಿಸಬೇಕು ಎಂದು ಉಪನ್ಯಾಸಕ ಬೊಮ್ಮೆಕಲ್‌ ವೆಂಕಟೇಶ್‌ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ತೃತೀಯ ಬಿ.ಎ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಸ್ವಾಸ್ಥ್ಯದ ಜತೆಗೆ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಅಗತ್ಯವಾದ ಶಿಕ್ಷಣವನ್ನು ನೀಡುವಂತಹ ಪಠ್ಯ ರೂಪಿಸಬೇಕು. ಇಂದಿನ ಮಕ್ಕಳು ಓದುತ್ತಿರುವ ಪಠ್ಯಗಳು ಕೇವಲ ಅಕ್ಷರಾಭ್ಯಾಸ ಮತ್ತು ಪದವಿ ಪಡೆದುಕೊಳ್ಳಲು ಅನುಕೂಲವಾಗಿವೆ ಎಂದರು.

ADVERTISEMENT

ಸಮಾಜ ಹಾಳಾಗುತ್ತಿರುವ ಕಾರಣ, ಯಾರ ಸ್ವಾರ್ಥದಿಂದ ದೇಶದಲ್ಲಿ ಅಸಮಾನತೆ ತಾಂಡವಾಳುತ್ತಿದೆ. ಅದಕ್ಕಿರುವ ಪರಿಹಾರ ಮಾರ್ಗಗಳ ಬಗ್ಗೆ ಯಾವುದೇ ಪಠ್ಯಗಳು ಹೇಳುತ್ತಿಲ್ಲ. ಪಠ್ಯಗಳನ್ನು ಸಮಾಜಮುಖಿಯಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಮಾಧ್ಯಮಗಳು ಟಿ.ಆರ್‌ಪಿ ಸಂಸ್ಕೃತಿ ಕಲಿತು ಅನಾರೋಗ್ಯಕರ ಸ್ಪರ್ಧೆ ನಡೆಸುತ್ತಿವೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಪಠ್ಯಗಳು ಮಕ್ಕಳನ್ನು ರೂಪಿಸುವಂತೆ ಮಾಧ್ಯಮಗಳು ಸಮಾಜ ರೂಪಿಸುತ್ತವೆ. ಸಾಮಾಜಿಕ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಇಂ.ಟಿ. ವೆಂಕಟರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಲಭ್ಯವಿರುವ ಎಲ್ಲ ಅವಕಾಶ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲ ಬಾಲಸುಬ್ರಮಣ್ಯಂ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಂ. ತಿಮ್ಮರಾಯಪ್ಪ, ಪ್ರೊ.ಎಸ್‌.ಎಂ.ವೆಂಕಟೇಶ್‌, ಪ್ರೊ. ಕವಿತಾ ಮಾತನಾಡಿದರು. ಉಪನ್ಯಾಸಕರಾದ ಸುರೇಶಬಾಬು, ನಾಗೇಶ್‌, ರಘುನಾಥ್‌, ಸಹನಾ, ರೂಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.