ADVERTISEMENT

ಉಪನ್ಯಾಸಕನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 8:40 IST
Last Updated 27 ಜುಲೈ 2017, 8:40 IST

ಗುಡಿಬಂಡೆ: ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಂ. ಅಮರನಾರಾಯಣ ಅಧಿಕಾರ ಬಿಟ್ಟುಕೊಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜಿಗೆ ಉಪನ್ಯಾಸಕರೊಬ್ಬರು ಬುಧವಾರ ಧರಣಿ ನಡೆಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 8 ವರ್ಷಗಳಿಂದ ಕಾಯಂ ಪ್ರಾಂಶುಪಾಲರ ಹುದ್ದೆ ಖಾಲಿಯಿದೆ. ಆ ಸ್ಥಾನವನ್ನು ಕಾಲೇಜಿನ ಹಿರಿಯ ಉಪನ್ಯಾಸಕಿ ಸುಜಾತಾ ವಹಿಸಿಕೊಳ್ಳಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಕಿರಿಯ ಉಪನ್ಯಾಸಕ ಎಂ. ಅಮರನಾರಾಯಣ ಅವರು ಪ್ರಭಾವ ಹೊಣೆ ಹೊತ್ತಿದ್ದರು.

ಹಿರಿಯ ಉಪನ್ಯಾಸಕ ಬಿ.ಆರ್. ವೆಂಕಟರಾಮು ಮಾತನಾಡಿ, ‘ನಾನೂ ಇದೀಗ ಕಾಲೇಜಿಗೆ ವರ್ಗವಾಗಿ ಬಂದಿದ್ದೇನೆ. ಸರ್ಕಾರದ ನಿಯಮದ ಪ್ರಕಾರ ಹಿರಿಯ ಉಪನ್ಯಾಸಕನಾದ ನಾನು ಪ್ರಭಾರ ಪ್ರಾಂಶುಪಾಲರ ಹುದ್ದೆಗೆ ಅರ್ಹ. ಅದಕ್ಕಾಗಿ ಹುದ್ದೆ ಬಿಟ್ಟು ಕೊಡುವಂತೆ ಮನವಿ ಮಾಡಿದೆ.

ADVERTISEMENT

ಆದರೆ ಅಮರನಾರಾಯಣ ಅವರು ಅಧಿಕಾರ ಬಿಟ್ಟುಕೊಡುತ್ತಿಲ್ಲ. ಸರ್ಕಾರದ ಆದೇಶ ತರುವಂತೆ ಸೂಚಿಸಿದ್ದರು. ಆದೇಶ ಪತ್ರ ನೀಡಿದರೂ ಸ್ವೀಕರಿಸುತ್ತಿಲ್ಲ. ಹೀಗಾಗಿ ಧರಣಿ ನಡೆಸುವುದು ಅನಿವಾರ್ಯವಾಯಿತು’ ಎಂದು ತಿಳಿಸಿದರು.

ಅಮರನಾರಾಯಣ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ದೂರು ನೀಡಿದ್ದಾರೆ. ವಿದ್ಯಾರ್ಥಿ ವೇತನ ಮತ್ತು ಅತಿಥಿ ಉಪನ್ಯಾಸಕರ ವೇತನ ದುರುಪಯೋಗದ ಬಗ್ಗೆ ಲೋಕಾಯುಕ್ತ ಪೊಲೀಸರಿಗೂ ದೂರು ಸಲ್ಲಿಕೆಯಾಗಿವೆ. ಈ ಕುರಿತು ತನಿಖೆ ನಡೆಯುತ್ತಿದೆ.

ಪ್ರಭಾರ ಪ್ರಾಂಶುಪಾಲರನ್ನು ವರ್ಗಾಯಿಸುವಂತೆ ಸಾರ್ವಜನಿಕರೂ ಒತ್ತಾಯಿಸಿದ್ದಾರೆ. ಬದಲಾವಣೆಗೆ ಶಾಸಕರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ ರಾಜಕೀಯ ಪ್ರಭಾವದಿಂದ ಅಮರನಾರಾಯಣ ಅವರು ಅಧಿಕಾರ ಬಿಡುತ್ತಿಲ್ಲ ಎಂದು ತಿಳಿಸಿದರು.

ಹಳೇ ವಿದ್ಯಾರ್ಥಿಗಳಿಂದ ದೌರ್ಜನ್ಯ: ‘ಕಾಲೇಜು ಆವರಣದಲ್ಲಿ ನಾನು ಧರಣಿ ನಡೆಸುತ್ತಿದ್ದಂತೆ ಅಮರನಾರಾಯಣ ಅವರನ್ನು ಬೆಂಬಲಿಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿಸಿದ್ದಾರೆ. ಅಲ್ಲದೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದರು.

’ಕಾಲೇಜಿನಲ್ಲಿ ಕಾಯಂ ಪ್ರಾಂಶುಪಾಲರು ಇಲ್ಲದಿದ್ದರೆ ಅದೇ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಕಾಯಂ ಹಿರಿಯ ಉಪನ್ಯಾಸಕರು ಈ ಹುದ್ದೆ ನಿರ್ವಹಿಸಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ ಪ್ರತ್ಯೇಕವಾಗಿ ನಿಮಗೇ ಪ್ರಾಂಶುಪಾಲರ ಹುದ್ದೆ  ಕೊಡಬೇಕು ಎಂದು ಸರ್ಕಾರದಿಂದ ಆದೇಶ ತರುವಂತೆ ಹೇಳುತ್ತಿದ್ದಾರೆ’ ಎಂದು ವೆಂಕಟರಾಮು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.