ADVERTISEMENT

ಚಿಂತಾಮಣಿ: ಜೆಡಿಎಸ್, ಕಾಂಗ್ರೆಸ್ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:09 IST
Last Updated 14 ಮಾರ್ಚ್ 2017, 5:09 IST

ಚಿಂತಾಮಣಿ: ತಾಲ್ಲೂಕು ಪಂಚಾಯಿತಿ ಯಲ್ಲಿ ಅನುದಾನ ನೀಡುವುದರಲ್ಲಿ ಜೆಡಿಎಸ್‌ ಸದಸ್ಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮವಾರ ಬೆಳಿಗ್ಗೆ ನೂರಾರು ಜೆಡಿಎಸ್‌ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಧರಣಿ ಕುಳಿತರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾ ಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿ, ನ್ಯಾಯಬೇಕು ಎಂದು ಒತ್ತಾಯಿ ಸಿದರು.

ಜೆಡಿಎಸ್‌ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್‌, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾಲ್ಲೂಕು ಪಂಚಾಯಿತಿ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು. ಆದರೆ, ಇಲ್ಲಿನ ತಾಲ್ಲೂಕು ಪಂಚಾಯಿತಿ ಯಲ್ಲಿ ಪಕ್ಷಪಾತ  ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್‌ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್‌ ಅವರು ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ ಸದಸ್ಯರಿಗೂ ₹ 4 ಲಕ್ಷ ಅನುದಾನ ಬರುತ್ತದೆ. ಅದನ್ನೂ ಸಹ ಕಬಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೈವಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ವಿರುದ್ಧ ಅನೇಕ ದೂರುಗಳನ್ನು ನೀಡಿದ್ದರೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಯಂತೆ ಕೆಲಸ ಮಾಡುತ್ತಿ ದ್ದಾರೆ’ ಎಂದು ಆರೋಪಿಸಿದರು.

ತಹಶೀಲ್ದಾರ್‌ ಎಂ.ಗಂಗಪ್ಪ ಹಾಗೂ ಕಾರ್ಯನಿರ್ವಹಣಾಧಿಕಾರಿ ಮನವಿ  ಸ್ವೀಕರಿಸಿ ಪ್ರಜಾಪ್ರಭುತ್ವದಲ್ಲಿ ಕಾನೂನಿ ನಂತೆ ಕ್ರಮಗಳನ್ನು ಕೈಗೊಳ್ಳಲಾಗು ವುದು ಎಂದು  ಭರವಸೆ ನೀಡಿದರು.

ಜೆಡಿಎಸ್‌ ಪಕ್ಷದ ಮುಖಂಡರಾದ ಕುರುಬೂರು ರವೀಂದ್ರಗೌಡ, ಕೈವಾರ ಸುಬ್ಬಾರೆಡ್ಡಿ, ಪೆದ್ದೂರು ನಾಗರಾಜರೆಡ್ಡಿ, ಸುಬ್ಬಾರೆಡ್ಡಿ, ಸಾಧಿಕ್‌, ದೊಡ್ಡಬೊಮ್ಮ ನಹಳ್ಳಿ ವೆಂಕಟರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್‌.ನಾರಾ ಯಣಸ್ವಾಮಿ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

**

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್‌ ಸರ್ಕಾರಿ ಅಧಿಕಾರಿ ಯಾಗಿ ಕೆಲಸ ಮಾಡದೆ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-ರಾಜಗೋಪಾಲ್‌, ಜೆಡಿಎಸ್ ಅಧ್ಯಕ್ಷ

**

ಶಾಸಕರ ಕಾರ್ಯವೈಖರಿ ಖಂಡಿಸಿ ಕಾಂಗ್ರೆಸ್ ಧರಣಿ

ಚಿಂತಾಮಣಿ: ಜೆಡಿಎಸ್‌ ನಡೆಸಿದ ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಮತ್ತು ಉಪಾಧ್ಯಕ್ಷ ಶ್ರೀನಿವಾಸ್‌ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಲಾಗಿದೆ ಹಾಗೂ ತಾಲ್ಲೂಕು ಪಂಚಾಯಿತಿ ಕಟ್ಟಡದ ಗಾಜು ಒಡೆದು ಹಾನಿಗೊಳಿಸಲಾಗಿದೆ ಎಂದು ಆರೋಪಿಸಿ  ಕಾಂಗ್ರೆಸ್‌ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ‘ಮಹಿಳೆಯಾದ ಅಧ್ಯಕ್ಷೆ ಮತ್ತು ಪರಿಶಿಷ್ಟ ಜಾತಿಯ ಉಪಾಧ್ಯಕ್ಷನಾದ ನನ್ನ ಮೇಲೆ ದೌರ್ಜನ್ಯ ಎಸಗಿರುವುದು ನಾಚಿಕೆಗೇಡು. ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ತಮ್ಮ ಕೊಠಡಿಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದಾಗ ವಿನಾಕಾರಣ ಜೆಡಿಎಸ್‌ ಕಾರ್ಯಕರ್ತರು ಗುಂಪಾಗಿ ಬಂದು ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದಿಂದ ಬಂದಿರುವ ಅನುದಾನವನ್ನು ಸದಸ್ಯರಿಗೆ ಹಂಚಬೇಕು ಎಂದು ಕಾನೂನು ಇಲ್ಲ. ಡಿ.7 ರಂದು ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿ ಅನುಮೋದನೆ ಪಡೆದು ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಎಲ್ಲ ಸದಸ್ಯರ ಸಮ್ಮುಖದಲ್ಲೇ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

‘ನಗರಸಭೆಯಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದು, 4 ವರ್ಷದಿಂದ ಕಾಂಗ್ರೆಸ್‌ ಸದಸ್ಯರಿಗೆ ಯಾವುದೇ ಅನುದಾನ ನೀಡಿಲ್ಲ. ನಗರದಲ್ಲಿ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗದ ಶಾಸಕರು ವಿನಾಕಾರಣ ಶಾಂತಿ ಭಂಗಕ್ಕೆ ಪ್ರಚೋದಿಸುತ್ತಿದ್ದಾರೆ’ ಎಂದು  ದೂರಿದರು.

ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ವಿರುದ್ದ ದೌರ್ಜನ್ಯ ನಡೆಸಿರುವ ಹಾಗೂ ತಾಲ್ಲೂಕು ಪಂಚಾಯಿತಿ ಕಟ್ಟಡಕ್ಕೆ ಕಲ್ಲು ಎಸೆದು ಹಾನಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸ್ಕೂಲ್‌ ಸುಬ್ಬಾರೆಡ್ಡಿ, ಶಿವಣ್ಣ, ನಾಗ ರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಹಾಗೂ ಸದಸ್ಯರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

**

ಶಾಸಕರು  ಕೆಡಿಪಿ ಸಭೆ ನಡೆಸುತ್ತಾ, ಹೊರಗೆ ತಮ್ಮ ಬೆಂಬಲಿಗರಿಂದ ದೌರ್ಜನ್ಯ ನಡೆಸಿರುವುದು ದುರದೃಷ್ಟಕರ. ಅಭಿವೃದ್ಧಿ ಸಹಿಸದ ಕಿಡಿಗೇಡಿಗಳು ಈ ರೀತಿಯ ಕೆಲಸ ಮಾಡುತ್ತಿದ್ದಾರೆ.
-ಶ್ರೀನಿವಾಸ್, ತಾ.ಪಂ. ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.