ADVERTISEMENT

ಜಗಜೀವನರಾಂ ಬದುಕು ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 9:24 IST
Last Updated 6 ಏಪ್ರಿಲ್ 2017, 9:24 IST
ಜಗಜೀವನರಾಂ ಬದುಕು ಅನುಕರಣೀಯ
ಜಗಜೀವನರಾಂ ಬದುಕು ಅನುಕರಣೀಯ   

ಚಿಕ್ಕಬಳ್ಳಾಪುರ: ‘ಶೋಷಿತ, ದುರ್ಬಲ ವರ್ಗದವರಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟ ಹಸಿರು ಕ್ರಾಂತಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಬದುಕು ಮತ್ತು ಆದರ್ಶಗಳು ಅನುಕರಣೀಯ’ ಎಂದು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಾಬು ಜಗಜೀವನರಾಂ ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ ಅವರ ಜೀವನವನ್ನು ಪ್ರತಿಯೊಬ್ಬರೂ ಮಾದರಿಯಾಗಿಟ್ಟುಕೊಂಡು ಸಮಸಮಾಜ ನಿರ್ಮಾಣ ಮಾಡಲು ಮುಂದಾಗಬೇಕಿದೆ. ಜಾತೀಯತೆ, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಆ ಮೂಲಕ ಸಮಸಮಾಜಕ್ಕಾಗಿ ಶ್ರಮಿಸಿದ ಮಹನೀಯರಿಗೆ ಗೌರವ ಸೂಚಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದ ಶೋಷಿತರ ಏಳಿಗೆಗೆ ಶ್ರಮಿಸಿದ ಜಗಜೀವನರಾಂ, ಪ್ರತಿ ಹಂತದಲ್ಲೂ ಅವರಿಗೆ ಚೈತನ್ಯ ತುಂಬುವ ಕೆಲಸ ಮಾಡಿದರು. ಅಪಾರ ರಾಜಕೀಯ ಅನುಭವ ಮತ್ತು ನೈಪುಣ್ಯತೆ ಹೊಂದಿದ್ದ ಅವರು ಮೂರು ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಂದರು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ. ಮಂಜುನಾಥ್ ಮಾತನಾಡಿ, ‘ಜಗಜೀವನರಾಂ ಅವರ ಹೋರಾಟದ ಹಾದಿ ಮತ್ತು ಸಾಧನೆ ಗಣನೀಯವಾದ್ದದ್ದು. ದಲಿತ ಕುಟುಂಬದಲ್ಲಿ ಜನಿಸಿ, ಅನೇಕ ಅಪಮಾನಗಳನ್ನು ಅನುಭವಿಸಿ ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಅವರ ಜೀವನ, ಆದರ್ಶ ಎಲ್ಲರಿಗೂ ಮಾದರಿಯಾಗಬೇಕು’ ಎಂದು ಹೇಳಿದರು.

‘ಆಪ್ತ ವಲಯದಲ್ಲಿ ಬಾಬೂಜಿ ಎಂದೇ ಖ್ಯಾತರಾಗಿದ್ದ ಅವರು ದೇಶದ ಆಹಾರದ ಕೊರತೆ ನೀಗಿಸಲು ರೈತರಿಗೆ ಹಸಿರು ಕ್ರಾಂತಿಯ ಮಂತ್ರ ಹೇಳಿಕೊಟ್ಟರು. ಪ್ರತಿಯೊಬ್ಬರು ಅಂತಹ ಮಹಾನ್ ನಾಯಕನ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ  ಮಾಡಲು ಸಾಧ್ಯ’ ಎಂದು ತಿಳಿಸಿದರು.

ಶಿಕ್ಷಣತಜ್ಞ ಪ್ರೊ.ಕೋಡಿ ರಂಗಪ್ಪ ಮಾತನಾಡಿ, ‘ಜಾತಿ ವ್ಯವಸ್ಥೆಯನ್ನೂ ಮೀರಿ ಉನ್ನತ ಶಿಕ್ಷಣ ಪಡೆದ ಜಗಜೀವನರಾಂ ಅವರು ಅಪಾರವಾದ ಜ್ಞಾನ ಸಂಪತ್ತನ್ನು ಪಡೆಯುವ ಮೂಲಕ ತಮ್ಮ ವಿದ್ವತ್ತಿನಿಂದ ರಾಜಕೀಯ ಕ್ಷೇತ್ರದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಪಡೆದರು. ವಿದ್ವತ್ತಿಗೆ ಜಾತಿಯನ್ನು ಮೀರಿ ಬೆಲೆಯಿದೆ ಎಂಬುದನ್ನು ಸಾಧಿಸಿ ತೋರಿಸಿದ ಅವರ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ. ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ. ರಾಜಾಕಾಂತ್, ಕೆ.ಎಂ.ಮುನೇಗೌಡ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್, ತಹಶೀಲ್ದಾರ್ ಮೋಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.