ADVERTISEMENT

ದೇಶದ ಅಭಿವೃದ್ಧಿಗೆ ಕೈಗಾರಿಕಾ ಅಭಿವೃದ್ಧಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:17 IST
Last Updated 10 ನವೆಂಬರ್ 2017, 6:17 IST

ಚಿಕ್ಕಬಳ್ಳಾಪುರ: ‘ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು. ನಗರದಲ್ಲಿ ಗುರುವಾರ ದಲಿತರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ (ಡಿಐಸಿಸಿಐ–ಡಿಕ್ಕಿ-), ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿಐ) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ಟ್ಯಾಂಡಪ್‌ ಇಂಡಿಯಾ’ ಮತ್ತು ‘ಕೈಗಾರಿಕೆ ನೀತಿ 2014–19’ರ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು ಅನೇಕ ದಶಕಗಳೇ ಕಳೆದರೂ ನಮ್ಮಲ್ಲಿ ಇಂದಿಗೂ ಸಮಾನತೆ ಎಂಬ ಸಂವಿಧಾನದ ಆಶಯ ಈಡೇರಿಲ್ಲ. ಬಡತನ, ಶ್ರೀಮಂತಿಕೆಯ ದೊಡ್ಡ ಕಂದಕವಿದೆ. ಅದಕ್ಕಾಗಿಯೇ ಇಂದಿಗೂ ಮೀಸಲಾತಿ ಪ್ರಸ್ತುತವಾಗಿದೆ. ಇವತ್ತು ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ರದ್ದು ಮತ್ತು ಜಿಎಸ್‌ಟಿ ಜಾರಿಗೆ ತಂದು ಸಣ್ಣ ಕೈಗಾರಿಕೆಗಳ ಬೆನ್ನೆಲುಬು ಮುರಿದಂತಾಗಿದೆ’ ಎಂದು ಹೇಳಿದರು.

‘ಕೆಳ ಸಮುದಾಯಗಳನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗಪಡಿದುಕೊಳ್ಳಬೇಕು. ಬರೀ ಬಲಾಢ್ಯ ಗುತ್ತಿಗೆದಾರರ ಪಾಲಾಗುತ್ತಿದ್ದ ಟೆಂಡರ್‌ಗಳನ್ನು ನಮ್ಮ ಸರ್ಕಾರ ಪರಿಶಿಷ್ಟ ಸಮುದಾಯದವರಿಗೆ ನೀಡುವ ಉದ್ದೇಶದಿಂದ ಹೊಸ ಕಾನೂನು ತಂದಿತು’ ಎಂದು ತಿಳಿಸಿದರು.

ADVERTISEMENT

ಡಿಕ್ಕಿ- ದಕ್ಷಿಣ ಭಾರತ ಸಂಯೋಜಕ ರಾಜಾ ನಾಯಕ್‌ ಮಾತನಾಡಿ, ‘2005ರಲ್ಲಿ ಪುಣೆಯಲ್ಲಿ ಸಣ್ಣದಾಗಿ ಆರಂಭಗೊಂಡ ಡಿಕ್ಕಿ ಇವತ್ತು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಕಳೆದ 10 ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. 2.50 ಲಕ್ಷ ಉದ್ದಿಮೆದಾರರನ್ನು ಸೃಷ್ಟಿಸಿದೆ. ಇವತ್ತು ದೇಶದಲ್ಲಿ ಕಾಣಿಸಿಕೊಂಡಿರುವ ನಿರುದ್ಯೋಗದ ಪಿಡುಗಿಗೆ ಸ್ವಯಂ ಉದ್ಯೋಗ ಮಾಡುವುದೆ ಮದ್ದು’ ಎಂದು ಅಭಿಪ್ರಾಯಪಟ್ಟರು.

‘ಡಿಕ್ಕಿ ಪ್ರಯತ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಕಿಯ ಫಲವಾಗಿ ‘ಸ್ಟ್ಯಾಂಡಪ್‌ ಇಂಡಿಯಾ’ ಯೋಜನೆ ಜಾರಿಗೆ ಬಂದಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₨10 ಸಾವಿರ ಕೋಟಿ ಮೀಸಲಿಟ್ಟಿದೆ. ಮೋದಿ ಅವರ ನೇರವಾಗಿ ಈ ಯೋಜನೆಯಲ್ಲಿ ಭಾಗಿಯಾಗಿರುವುದರಿಂದ ಯೋಜನೆಯ ಗುರಿ ಮುಟ್ಟಲೇ ಬೇಕು’ ಎಂದು ತಿಳಿಸಿದರು.
‘ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ಜನರು ಮತ್ತು ಮಹಿಳೆಯರಿಗೆ 10 ಲಕ್ಷದಿಂದ ₨1 ಕೋಟಿ ವರೆಗೆ ಸಾಲ ದೊರೆಯುತ್ತದೆ. ಅದರಿಂದ ಸ್ವಯಂ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಈ ಹಿಂದೆ ಬ್ಯಾಂಕ್‌ಗಳು ಸೇವಾ ವಲಯಕ್ಕೆ ಸಾಲ ನೀಡುತ್ತಿರಲಿಲ್ಲ. ಅದರಲ್ಲೂ ಭದ್ರತೆ, ಜಾಮೀನು ನೀಡದೆ ಬ್ಯಾಂಕ್‌ ಸಾಲ ಸಿಗುತ್ತಿರಲಿಲ್ಲ. ಈ ಯೋಜನೆಯಡಿ ಯಾವುದೇ ಭದ್ರತೆ ಒದಗಿಸದೆ, ಬ್ಯಾಂಕಿಗೆ ಅಲೆದಾಡಲು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಕೂಡ ಸಾಲಕ್ಕೆ ಅರ್ಜಿ ಸಲ್ಲಿಸಬಹುದು’ ಎಂದರು. ‘ಆದರೆ ನಿಮ್ಮ ಯೋಜನಾ ವರದಿ ಅಚ್ಚುಕಟ್ಟಾಗಿರಬೇಕು. ಅಗತ್ಯ ದಾಖಲೆಗಳು, ಮಾಹಿತಿಗಳನ್ನು ಬ್ಯಾಂಕಿಗೆ ಒದಗಿಸಿದರೆ ಖಂಡಿತ ಸಾಲ ದೊರೆಯುತ್ತದೆ. ಅದನ್ನು ಪ್ರಾಮಾಣಿಕವಾಗಿ ಮರುಪಾವತಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಎಸ್‌ಐಡಿಬಿಐ ಪ್ರಧಾನ ವ್ಯವಸ್ಥಾಪಕ ಸಾಹು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಎಸ್‌.ಎಚ್‌.ವೀರಣ್ಣ, ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎಸ್‌.ಎನ್‌.ಭಟ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ, ಜಂಟಿ ನಿರ್ದೇಶಕ ಮಹಮ್ಮದ್‌ ಅತೀಕುಲ್ಲಾ ಷರೀಫ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.