ADVERTISEMENT

ಪಟ್ಟಣದಲ್ಲಿ ನೀರಿಗೆ ಹೆಚ್ಚಿದ ಹಾಹಾಕಾರ

ಪ್ರಮುಖ ವಾರ್ಡ್‌ಗಳಲ್ಲಿ ಸಂಪ್‌ ತೆರೆಯಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:50 IST
Last Updated 10 ಏಪ್ರಿಲ್ 2017, 4:50 IST
ಬಾಗೇಪಲ್ಲಿ ಕಸಬಾ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7 ರ ಪರಗೋಡು ಬಳಿಯಿರುವ ಚಿತ್ರಾವತಿ ಬ್ಯಾರೇಜ್  ಬರಿದಾಗಿರುವುದು
ಬಾಗೇಪಲ್ಲಿ ಕಸಬಾ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7 ರ ಪರಗೋಡು ಬಳಿಯಿರುವ ಚಿತ್ರಾವತಿ ಬ್ಯಾರೇಜ್ ಬರಿದಾಗಿರುವುದು   

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಜಲಮೂಲಗಳು ಬಹುತೇಕ ಬತ್ತಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಮಳೆ ಇಲ್ಲದೇ ಕಂಗೆಟ್ಟಿರುವ ಗ್ರಾಮೀಣ ಜನರು ಜೀವನ ನಡೆಸಲು ಹರಸಾಹಸ ಮಾಡುವುದು ಒಂದೆಡೆಯಾದರೆ ಪಟ್ಟಣದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ನಿಬಾಯಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ.

ಅಧಿಕಾರಿಗಳು ಕಾಟಾಚಾರಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡುತ್ತಿದ್ದಾರೆ. ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳು ನೀರಿನ ಸಂಪರ್ಕ ಹೊಂದಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ನಿವಾಸಿಗಳು ದೂರುತ್ತಾರೆ.

ದಿನ ದಿನಕ್ಕೂ ನೀರಿನ ಸಮಸ್ಯೆ ಕಠಿಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಿ ಕ್ರಿಯಾಯೋಜನೆ ಅನುಷ್ಠಾನಗೊಳಿಸಿ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಪಟ್ಟಣದ ನಿವಾಸಿ ರಾಮ್‌ಮೋಹನ್‌ ಒತ್ತಾಯಿಸುವರು.

ಪಟ್ಟಣದ 23 ವಾರ್ಡ್‌ಗಳಲ್ಲಿ 2011 ರ ಜನಗಣತಿ ಪ್ರಕಾರ 27011 ಜನಸಂಖ್ಯೆ ಇದೆ. ಈ ಜನಸಂಖ್ಯೆಗೆ ಅನುಗುಣವಾಗಿ ದಿನಕ್ಕೆ  ಕುಡಿಯುವ ನೀರು ಅವಶ್ಯಕತೆ ಇದೆ. ಆದರೆ 1.22 ಮಿಲಿಯನ್ ಲೀಟರ್‌ ನೀರು ಸರಬರಾಜು ಆಗುತ್ತಿರುವುದರಿಂದ ಇನ್ನೂ 2.44 ಮಿಲಿಯನ್ ಲೀಟರ್‌ ನಷ್ಟು ನೀರು ಅಭಾವ ಉಂಟಾಗಿದೆ ಎಂದು ಪುರಸಭೆಯ ಸಹಾಯಕ ಎಂಜಿನಿಯರ್‌ ಚಕ್ರಪಾಣಿ  ತಿಳಿಸಿದರು.

ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗಾಗಿ ವಿವಿಧ ಕಡೆ ಒಟ್ಟು 114 ಕೊಳವೆ ಬಾವಿಗಳಿವೆ. ಇದರ ಪೈಕಿ 49 ಕೊಳವೆಬಾವಿಗಳಲ್ಲಿ ಮಾತ್ರ ನೀರು ಲಭ್ಯವಿದೆ. ಈಚೆಗೆ 9 ಕಡೆ ಕೊಳವೆಬಾವಿಗಳನ್ನು ಕೊರೆಯಲಾಗಿದ್ದು 3 ಕೊಳವೆಬಾವಿಗಳಲ್ಲಿ ಮಾತ್ರ ನೀರು ಲಭ್ಯವಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಕುಡಿಯುವ ನೀರು ಅಭಾವ ನೀಗಿಸಲು 5 ಕಡೆ ನೀರಿನ ಸಂಪ್‌ಗಳನ್ನು ತೆರೆಯಲು ಯೋಚಿಸಲಾಗಿದೆ. 23ನೇ ವಾರ್ಡ್‌ನ ಎರ್ರಕಾಲುವೆ ಬಳಿ, 8 ಮತ್ತು 9ನೇ ವಾರ್ಡ್‌ ಸಂಪರ್ಕವಿರುವ ನೇತಾಜಿ ವೃತ್ತ, 7ನೇ ವಾರ್ಡ್‌ ಜಚನಿ ಶಾಲೆಯ ಬಳಿ 50 ಸಾವಿರ ಲೀಟರ್ ಸಾಮರ್ಥ್ಯವಿರುವ ನೀರಿನ ಸಂಪ್‌ ತೆರೆಯಲಾಗುತ್ತದೆ.

20 ಮತ್ತು 21ನೇ ವಾರ್ಡ್‌ಗೆ ಸಂಪರ್ಕವಿರುವ ಎಚ್.ಎನ್.ಪಾರ್ಕ್‌ ಹಾಗೂ 11ನೇ ವಾರ್ಡ್‌ನ ವೆಂಕಟಾಚಲಪತಿ ಮನೆಯ ಸಮೀಪ 1 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್‌ ನಿರ್ಮಿಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*
ವಾರ, ಹದಿನೈದು ದಿನಕ್ಕೆ ಒಮ್ಮೆ ನೀರು ಪೂರೈಸಲಾಗುತ್ತದೆ. ನೀರಿನ ಸಮಸ್ಯೆ ತೀವ್ರವಾಗಿರುವ ಕಡೆ ಪುರಸಭೆ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಬೇಕು.
-ಮಹಮ್ಮದ್ ಎಸ್ ನೂರುಲ್ಲಾ,
ಪಟ್ಟಣ ನಿವಾಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.