ADVERTISEMENT

ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಸಿ

ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:39 IST
Last Updated 9 ಮಾರ್ಚ್ 2017, 7:39 IST
ಶಿಡ್ಲಘಟ್ಟ : ರೈತರು ಹಿಪ್ಪುನೇರಳೆಗೆ ಹನಿ ನೀರಾವರಿಯನ್ನೆ ಅವಲಂಬಿಸದೆ ಮರಕಡ್ಡಿ ಪದ್ಧತಿಯಲ್ಲಿಯೂ ಹಿಪ್ಪುನೇರಳೆ ಬೆಳೆಸಿ ಲಾಭ ಗಳಿಸಬಹುದು ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಹೇಳಿದರು.
 
 ನಗರದ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಮೈರಾಡ ಸಂಸ್ಥೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ನಡೆದ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮತ್ತು ಒಣ ಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿ ಹಾಗೂ ರೇಷ್ಮೆಬೆಳೆ ನಿರ್ವಹಣೆಯ ತಾಂತ್ರಿಕತೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 
ತೀವ್ರ ನೀರಿನ ಕೊರತೆ ಅನುಭವಿಸುತ್ತಿರುವ ಬಯಲುಸೀಮೆ ಭಾಗದ ರೈತರು ರೇಷ್ಮೆಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಇತ್ತಿಚೆಗೆ ನೀರಿನ ಅಭಾವದಿಂದಾಗಿ ಬಹಳಷ್ಟು ರೈತರು ರೇಷ್ಮೆ ಉದ್ಯಮದಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಜೀವನೋಪಾಯ ಕಷ್ಟಕರವಾಗುತ್ತಿದೆ ಎಂದರು.
 
ರೇಷ್ಮೆ ಉತ್ಪಾದನೆಯಲ್ಲಿ  ಹೊಸ ತಾಂತ್ರಿಕತೆಗಳನ್ನು ಬಳಕೆ ಮಾಡಿಕೊಂಡರೆ ಉದ್ಯಮದಲ್ಲಿ ಆರ್ಥಿಕ ಸ್ವಾವಲಂಬನೆ ಕಾಣಬಹುದು ಎಂದರು. ಮೈರಾಡ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ರಿಷ್‌ಬುದ್ ಮಾತನಾಡಿ, ಮರಕಡ್ಡಿ ಪದ್ಧತಿಯನ್ನು ಅನುಸರಿಸುವುದರಿಂದ ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹಿಪ್ಪುನೇರಳೆಯ ಜೊತೆಯಲ್ಲೆ ಮಿಶ್ರಬೆಳೆಗಳನ್ನು ಬೆಳೆಯಬಹುದು. ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ ರೇಷ್ಮೆ ಉದ್ಯಮವನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
 
ತಲಘಟ್ಟಪುರದ ಕೆಎಸ್ಎಸ್ಆರ್‌ಡಿಐ ನ ವಿಜ್ಞಾನಿ ಡಾ.ಚಲುವಾಚಾರಿ ಅವರು ಒಣಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಬೇಸಿಗೆ ಕಾಲದಲ್ಲಿ ರೇಷ್ಮೆ ನಿರ್ವಹಣೆ ಕುರಿತು ಡಾ.ಮರಿಬಾಶೆಟ್ಟಿ ತರಬೇತಿ ನೀಡಿದರು.
 
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ  ಬಿ.ಆರ್.ನಾಗಭೂಷಣ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ಪ್ರವೀಣ್, ಮೈರಾಡ ಸಂಸ್ಥೆಯ ಗಾಯತ್ರಿ ಲಾಲ್, ನಿರ್ದೇಶಕ ವೆಂಕಟರೆಡ್ಡಿ ಗಿರಣಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.