ADVERTISEMENT

ರಾಜ್ಯ ಸರ್ಕಾರದಿಂದ ಭ್ರಷ್ಟರ ರಕ್ಷಣೆ

ಕಾಂಗ್ರೆಸ್ ಆಡಳಿತ ವೈಖರಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 6:26 IST
Last Updated 21 ಫೆಬ್ರುವರಿ 2017, 6:26 IST
ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮವಾರ ಕಾಂಗ್ರೆಸ್ ಆಡಳಿತದ ವೈಖರಿ ಖಂಡಿಸಿ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಹಲವು ಸಚಿವ ಮತ್ತು ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತವರ ವಿರುದ್ಧ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಣೆ ಮಾಡುತ್ತಿದೆ’ ಎಂದು ಆರೋಪಿಸಿದರು.
 
‘ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಜಾನುವಾರುಗಳು ಮೇವು ಮತ್ತು ನೀರಿಗಾಗಿ ಒದ್ದಾಡುತ್ತಿವೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ಆರೋಪಿಸಿದರು.
 
‘ಸ್ಥಳೀಯ ಶಾಸಕರು ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ದಲಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದೇನೆ ಎಂದು ಹೇಳುವ ಶಾಸಕರು ಕ್ಷೇತ್ರದ ಎಷ್ಟು ಜನ ದಲಿತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಹೇಳಿದರು.
 
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷೆ ಎನ್.ಜ್ಯೋತಿರೆಡ್ಡಿ ಮಾತನಾಡಿ,‘ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ  ಭಾಗ್ಯಗಳ ಹೆಸರಿನಲ್ಲಿ ಸರ್ಕಾರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಯಾಕೆ ತಾತ್ಸಾರ ತೋರುತ್ತಿದೆ ತಿಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ರಮೇಶ್ ಜಾರಕಿಹೊಳಿ ಮತ್ತಿತರ ಕಾಂಗ್ರೆಸ್ ನಾಯಕರ ಮೇಲೆ ಅಕ್ರಮ ಆಸ್ತಿ ಆರೋಪಗಳಿವೆ. ಆದರೆ, ಈ ಬಗ್ಗೆ  ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದರು.
 
ಬಿ.ಬಿ.ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 
 
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಸತ್ಯನಾರಾಯಣ ಮಹೇಶ್, ಬಿ.ವಿ.ಗೋಪಿನಾಥ್, ವಂಶೀಕೃಷ್ಣ, ದೇವರಾಜ್, ಎಚ್.ಎಸ್.ಮುರಳೀಧರ್, ಬಾಲು, ಸುಜಾತಾ ಬಾಬು, ಸಿ.ಬಿ.ಕಿರಣ್, ಬಳುವನಹಳ್ಳಿ ಲೋಕೇಶ್, ವೆಂಕಟೇಶ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.