ADVERTISEMENT

ಶ್ರದ್ಧಾಭಕ್ತಿಯಿಂದ ಈದ್‌ ಮಿಲಾದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 9:20 IST
Last Updated 3 ಡಿಸೆಂಬರ್ 2017, 9:20 IST

ಚಿಂತಾಮಣಿ: ನಗರದ ಮುಸ್ಲಿಮರು ಶನಿವಾರ ಈದ್‌ ಮಿಲಾದ್‌ನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ನಗರದ ಎಲ್ಲ 22 ಮಸೀದಿಗಳಿಂದ ಬಂದ ಜನರು ದೊಡ್ಡಪೇಟೆಯ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡಿದ್ದರು. ಜಾಮಿಯಾ ಮಸೀದಿಯಿಂದ ಬೃಹತ್‌ ಮೆರವಣಿಗೆಯಲ್ಲಿ ತೆರಳಿ ನಗರದ ಪ್ರಮುಖ ರಸ್ತೆಗಳ ಮೂಲಕ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನ ತಲುಪಿದರು.

ಮಕ್ಕಾ–ಮದೀನ, ದರ್ಗಾ, ಮಸೀದಿ, ಟಿಪ್ಪು ಸುಲ್ತಾನ್‌ ಫಿರಂಗಿ, ವಿವಿಧ ವೇಷಭೂಷಣಗಳು ಸೇರಿದಂತೆ ಹಲವಾರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಜನಾಕರ್ಷಣೀಯವಾಗಿದ್ದವು.

ಮಧ್ಯಾಹ್ನ 3ಗಂಟೆಗೆ ಹೊರಟ ಮೆರವಣಿಗೆ ನೆಕ್ಕುಂದಿ, ಅಗ್ರಹಾರ, ಅಜಾದ್‌ಚೌಕ, ಎಂ.ಜಿ.ರಸ್ತೆ, ಪಿ.ಸಿ.ಆರ್‌.ಕಾಂಪ್ಲೆಕ್ಸ್‌ ಚೇಳೂರು ವೃತ್ತ, ಸರ್ಕಾರಿ ಬಸ್‌ನಿಲ್ದಾಣ ರಸ್ತೆ, ಬೆಂಗಳೂರು ವೃತ್ತ, ಜೋಡಿ ರಸ್ತೆ, ಕೆನರಾಬ್ಯಾಂಕ್‌ ರಸ್ತೆ ಗಜಾನನ ವೃತ್ತದ ಮೂಲಕ ಸಂಜೆ 5 ಗಂಟೆಗೆ ಈದ್ಗಾ ಮೈದಾನ ತಲುಪಿತು.

ADVERTISEMENT

ಸಾಮೂಹಿಕವಾಗಿ ಅಸರ್‌ ನಮಾಜ್‌ ಸಲ್ಲಿಸಿದರು. ಜಾಮಿಯಾ ಮಸೀದಿಯ ಧರ್ಮಗುರು ಮೌಲಾನ ಮಹಮದ್‌ ಮುನಿಫ್‌ ರಜಾ ಅವರು ಮಹಮದ್‌ ಪೈಗಂಬರ್‌ ಕುರಿತು ಉಪನ್ಯಾಸ ನೀಡಿದರು.

ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ತಾಲ್ಲೂಕಿನ ಮಹಮದ್‌ಪುರ, ಉಪ್ಪರಪೇಟೆ ಗ್ರಾಮಗಳಿಂದಲೂ ಸ್ತಬ್ಧಚಿತ್ರಗಳು ಆಗಮಿಸಿದ್ದವು.

ಜಾಮಿಯಾ ಮಸೀದಿಯ ಅಧ್ಯಕ್ಷ ಗೌಸ್‌ಪಾಷಾ, ಉಪಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಮಹಮದ್‌ ಇನಾಯತ್‌, ಸದಸ್ಯರಾದ ಶೇಖ್‌ ಸಾಧಿಕ್‌ ರಜ್ವಿ, ಸಿಕಂದರ್‌, ಮುಜೀರ್‌ ಅಹಮದ್‌, ಟೀಪು, ಸನಾವುಲ್ಲಾ ಖಾನ್‌ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ನಾಗೇಶ್‌, ನಗರಠಾಣೆಯ ಇನ್‌ಸ್ಪೆಕ್ಟರ್‌ ಹನುಮಂತಪ್ಪ ನೇತೃತ್ವದಲ್ಲಿ ಪೊಲೀಸರು ಬಲವಾದ ಬಂದೋಬಸ್ತ್‌ ಏರ್ಪಡಿಸಿದ್ದರು.

ಶುಭಾಶಯ ವಿನಿಮಯ
ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಕಾರಣ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು. ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು.

ಕಿರಿಯರು ಮತ್ತು ಹಿರಿಯರು ಹೊಸ ಬಟ್ಟೆ ತೊಟ್ಟು ಸಂತಸಪಟ್ಟರು. ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು. ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪು ಗೂಡಿದ ಬಹುತೇಕ ಮಂದಿ ಮುಸ್ಲಿಮರು ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ವಿವಿಧ ರೀತಿಯ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳನ್ನು ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದರು.

ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು. ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.