ADVERTISEMENT

₹ 4 ಕೋಟಿ ಹಣ ವಂಚನೆ ಆರೋಪ

₹ 4 ಕೋಟಿ ಹಣ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 7:29 IST
Last Updated 5 ಜನವರಿ 2017, 7:29 IST

ಚಿಂತಾಮಣಿ: ಇಲ್ಲಿನ ವಿಜಯಾ ಬ್ಯಾಂಕಿನಲ್ಲಿ ಠೇವಣಿ ಇಡಬೇಕಾಗಿದ್ದ. ₹ 4 ಕೋಟಿ ಹಣ ದುರುಪಯೋಗವಾಗಿದೆ ಎಂದು ವಕ್ಫ್‌ ಮಂಡಳಿ ಮುಖ್ಯ ಲೆಕ್ಕಾಧಿಕಾರಿ ತುಳಸೀದಾಸ್‌ ಸೋಮವಾರ ನಗರ ಠಾಣೆಗೆ ದೂರು ನೀಡಿದ್ದಾರೆ.

ನಗರದ ವಿಜಯಾ ಬ್ಯಾಂಕ್‌ ಶಾಖೆಯಲ್ಲಿ ರಾಜ್ಯ ವಕ್ಫ್‌ ಮಂಡಳಿಯ ₹ 4,00,45465 ಬ್ಯಾಂಕಿನ ವ್ಯವಸ್ಥಾಪಕಿ ಎ.ಸುಶೀಲಾ, ಸಹಾಯಕ ವ್ಯವಸ್ಥಾಪಕ ಮುರುಕನ್ನಪ್ಪ ಹಾಗೂ ವಕ್ಫ್‌ ಮಂಡಳಿಯ ಕ್ಯಾಷಿಯರ್‌ ಸೈಯದ್‌ ಸಿರಾಜ್‌ ಅಹಮದ್‌ ಸೇರಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು  ದೂರು ದಾಖಲಾಗಿದೆ.

ಕಳೆದ ಅಕ್ಟೋಬರ್‌ 15 ರಂದು ಬ್ಯಾಂಕಿನ ವ್ಯವಸ್ಥಾಪಕಿ ಸುಶೀಲಾ ವಕ್ಫ್‌ ಮಂಡಳಿಗೆ ಪತ್ರ ಬರೆದು ₹ 10 ಕೋಟಿ ಠೇವಣಿ ಮಾಡಿದರೆ ಶೇ 7.5 ರಷ್ಟು ಬಡ್ಡಿ ನೀಡಲಾಗುವುದು ಎಂದು ತಿಳಿಸಿದ್ದರು. ಪತ್ರದ ಆಧಾರದ ಮೇಲೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅನುಮೋದನೆ ಪಡೆದು ಠೇವಣಿ ಮಾಡಲು ತೀರ್ಮಾನಿಸಲಾಗಿತ್ತು.

ನವೆಂಬರ್‌ 26 ರಂದು ಬೆಂಗಳೂರಿನ ಇಂಡಿಯನ್‌ ಬ್ಯಾಂಕ್‌ ಬೆನ್ಸನ್‌ ಟೌನ್‌ ಶಾಖೆಯ ಚೆಕ್‌ನಂ 839236 ರಲ್ಲಿ ₹ 2.29 ಕೋಟಿ ಹಾಗೂ ಚೆಕ್‌ ನಂ. 839237ರಲ್ಲಿ 1.71 ಕೋಟಿ ಹಣ ಕ್ಯಾಷಿಯರ್‌ ಸೈಯದ್‌ ಸಿರಾಜ್‌ ಅಹಮದ್‌ ಮೂಲಕ ವಿಜಯಾ ಬ್ಯಾಂಕ್‌ಗೆ ನೀಡಿ ಠೇವಣಿ ಪತ್ರಗಳನ್ನು ನೀಡುವಂತೆ ಕೋರಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್‌ 7 ರಂದು ಬ್ಯಾಂಕ್‌ ಚೆಕ್‌ಗಳನ್ನು ಸ್ವೀಕರಿಸಿದೆ. 20 ರಂದು ಹಣ ಜಮೆಮಾಡಿಕೊಂಡಿದ್ದರೂ ಠೇವಣಿ ಬಾಂಡ್‌ಗಳನ್ನು ನೀಡಿರುವುದಿಲ್ಲ. ಬದಲಿಗೆ ಡಿಸೆಂಬರ್‌ 5 ರಂದು ಮಂಡಳಿಯ ಕಚೇರಿಯಿಂದ ಬಂದ ಪತ್ರದಲ್ಲಿ ಹಣವನ್ನು ಅಜಯ್‌ ಶರ್ಮ ಅವರ ಕಂಪೆನಿ ಖಾತೆಗೆ ಜಮೆ ಮಾಡುವಂತೆ  ಕೋರಿರುವುದರಿಂದ ಡಿಸೆಂಬರ್‌ 21 ರಂದು ಕಂಪೆನಿಯ ಖಾತೆಗೆ ಹಣ ಜಮೆ ಮಾಡಿರುವುದಾಗಿ ವ್ಯವಸ್ಥಾಪಕ ತಿಳಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಂಡಳಿಯಿಂದ ಆ ರೀತಿ ಆದೇಶದ ಪತ್ರ ನೀಡಿಲ್ಲ. ಅದು ನಕಲಿ ಪತ್ರವಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ಸುಶೀಲಾ, ಸಹಾಯಕ ಮ್ಯಾನೇಜರ್‌ ಮುರುಕನ್ನಪ್ಪ ಹಾಗೂ ಮಂಡಳಿಯ ಕ್ಯಾಷಿಯರ್‌ ಸೈಯದ್‌ ಸಿರಾಜ್‌ ಸೇರಿಕೊಂಡು ಅವ್ಯವಹಾರ ನಡೆಸಿದ್ದಾರೆ. ಮೂವರ ವಿರುದ್ಧ ಕ್ರಮ ಕೈಗೊಂಡು ಮಂಡಳಿಯ ಹಣವನ್ನು ಹಿಂದಿರುಗಿಸಬೇಕು ಎಂದು ದೂರಿನಲ್ಲಿ ಮನವಿಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.