ADVERTISEMENT

ಅಕ್ರಮ– ಸಕ್ರಮ: ಕಾಂಗ್ರೆಸ್ ಮುಖಂಡರಿಂದ ಗೊಂದಲ ಸೃಷ್ಟಿ– ರಾಮಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 6:42 IST
Last Updated 18 ನವೆಂಬರ್ 2017, 6:42 IST

ಬಾಳೆಹೊನ್ನೂರು: ಗೋಮಾಳ ಜಾಗ ವನ್ನು ಅಕ್ರಮ– ಸಕ್ರಮದ ಅಡಿಯಲ್ಲಿ ಮಂಜೂರು ಮಾಡಬಾರದು ಎಂದು ಹೈಕೋರ್ಟ್ ನಿಂದ ಖಾಸಗಿ ವ್ಯಕ್ತಿಯೊಬ್ಬರು ತಡೆಯಾಜ್ಞೆ ತಂದು 6 ತಿಂಗಳು ಕಳೆದಿವೆ. ತಡೆಯಾಜ್ಞೆ ತೆರವುಗೊಳಿಸುವ ಕುರಿತು ರಾಜ್ಯ ಸರ್ಕಾರ ಅಡ್ವೊಕೇಟ್ ಜನರಲ್ ಮೂಲಕ ಯಾವುದೇ ಕ್ರಮ ಕೈಗೊಳ್ಳದೆ ಇದೀಗ ರೈತರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ ಆರೋಪಿಸಿದರು.

ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ 19, 2017 ರಂದು ಅಕ್ರಮ ಸಕ್ರಮದ ಅಡಿಯಲ್ಲಿ ಗೋಮಾಳವನ್ನು ಮಂಜೂರು ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ, ನವೆಂಬರ್ 2016ರಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅಕ್ರಮ –ಸಕ್ರಮದ ಅಡಿಯಲ್ಲಿ 1,838 ಅರ್ಜಿಗಳನ್ನು ಸ್ಥಿರೀಕರಣ ಮಾಡಲಾಗಿದ್ದು ಒಟ್ಟು 542 ಜನರಿಗೆ ಹಕ್ಕುಪತ್ರ ನೀಡಲಾಗಿದೆ’ ಎಂದರು.

‘ಗೋಮಾಳ ಜಮೀನಿಗೆ 799 ಅರ್ಜಿಗಳನ್ನು ಹಾಗೂ 527 ಅರ್ಜಿ ಗಳನ್ನು ಸೊಪ್ಪಿನ ಬೆಟ್ಟ ಹಾಗೂ ಅರಣ್ಯ ಇಲಾಖೆಗೆ ಒಳಪಡುವ ಜಾಗಗಳನ್ನು ಅಕ್ರಮ– ಸಕ್ರಮದ ಅಡಿಯಲ್ಲಿ ಪರಿಗಣಿಸಲು ರೈತರು ಅರ್ಜಿ ಸಲ್ಲಿಸಿದ್ದಾರೆ. ಶೃಂಗೇರಿಯ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಯಾವುದೇ ಹಕ್ಕು ಪತ್ರಗಳನ್ನು ರೈತರಿಗೆ ನೀಡುತ್ತಿಲ್ಲ. ಅವರು ವರ್ಗಾವಣೆಗೊಂಡಿದ್ದರೂ ಶೃಂಗೇರಿಯಿಂದ ಕಾಂಗ್ರೆಸ್ ಮುಖಂಡರು ಬಿಡುತ್ತಿಲ್ಲ’ ಎಂದು ದೂರಿದರು.

ADVERTISEMENT

ಕೊಪ್ಪದಲ್ಲಿ ಇತ್ತೀಚೆಗೆ ಶಾಸಕ ಡಿ.ಎನ್.ಜೀವರಾಜ್ ಅವರು ನಡೆಸಿದ ಸಭೆಯಲ್ಲಿ ಗೋಮಾಳ ಮಂಜೂರು ಕುರಿತು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ರೈತರ ಪರವಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಶಾಸಕರು ಅರ್ಜಿ ಸಲ್ಲಿಸಿದ್ದು ಒಂದೆರಡು ದಿನದಲ್ಲಿ ವಿಚಾರಣೆಗೆ ಬರಲಿದೆ. ತಡೆಯಾಜ್ಞೆ ನೀಡಿ ಆರು ತಿಂಗಳು ಕಳೆದರೂ ಅದನ್ನು ತೆರವುಗೊಳಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಯಾಕೆ ಪ್ರಯತ್ನಿಸಲಿಲ್ಲ ಎಂದರು.

ಮುಖಂಡ ಟಿ.ಎಂ.ಉಮೇಶ್ ಮಾತನಾಡಿ, ‘ಬಾಳೆಹೊನ್ನೂರು ಪಟ್ಟಣಕ್ಕೆ ಶಾಸಕ ಜೀವರಾಜ್ ಅವಧಿ ಯಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿ ನಡೆದಿದೆ. ಬಾಳೆಹೊನ್ನೂರಿನ ಮುಖ್ಯ ರಸ್ತೆ, ಹಲಸೂರು ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲಾಗಿದೆ.’ ಎಂದರು. ಹೋಬಳಿ ಅಧ್ಯಕ್ಷ ಕೆ.ಕೆ.ವೆಂಕಟೇಶ್, ವಕ್ತಾರ ಬಿ.ಜಗದೀಶ್ಚಂದ್ರ, ಕೆ.ಟಿ.ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪುಣ್ಯಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.