ADVERTISEMENT

ಒತ್ತುವರಿ: ಕುತ್ತಿಗೆ ಮೇಲಿರುವ ಹೊರೆ

ಮೂಡಿಗೆರೆ: ಹೊಸ ಶಾಸಕರಿಗೆ ಸಾಲು ಸಾಲು ಸವಾಲು

​ಪ್ರಜಾವಾಣಿ ವಾರ್ತೆ
Published 25 ಮೇ 2018, 8:04 IST
Last Updated 25 ಮೇ 2018, 8:04 IST
ಮೂಡಿಗೆರೆ ತಾಲ್ಲೂಕಿನ ತತ್ಕೊಳದಲ್ಲಿ 2004 ರಲ್ಲಿ ಕಾಫಿತೋಟವನ್ನು ಸುಪ್ರಿಂಕೋರ್ಟ್‌ ಆದೇಶದನ್ವಯ ತೆರವು ಮಾಡಿದ್ದ ಜಾಗದಲ್ಲಿ ಚಿಗುರಿರುವ ಕಾಫಿ ಗಿಡ.
ಮೂಡಿಗೆರೆ ತಾಲ್ಲೂಕಿನ ತತ್ಕೊಳದಲ್ಲಿ 2004 ರಲ್ಲಿ ಕಾಫಿತೋಟವನ್ನು ಸುಪ್ರಿಂಕೋರ್ಟ್‌ ಆದೇಶದನ್ವಯ ತೆರವು ಮಾಡಿದ್ದ ಜಾಗದಲ್ಲಿ ಚಿಗುರಿರುವ ಕಾಫಿ ಗಿಡ.   

ಮೂಡಿಗೆರೆ: ಹತ್ತು ಹೋಬಳಿ ಒಳಗೊಂಡು ವಿಶಾಲ ವ್ಯಾಪ್ತಿ ಹೊಂದಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಸಾರಥ್ಯದ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಸ್ಥಳೀಯ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಒತ್ತುವರಿ ಸಮಸ್ಯೆ ಬಗೆಹರಿಸುವ ಭರವಸೆಯು ಕುತ್ತಿಗೆ ಮೇಲಿನ ಹೊರೆ.

ಅಂಬಳೆ ಹೋಬಳಿ ಹೊರತು ಪಡಿಸಿದರೆ ಉಳಿದೆಲ್ಲ ಹೋಬಳಿಗಳಲ್ಲೂ ಕಾಫಿ ತೋಟಗಳಿವೆ. ಬಹುತೇಕ ಕಾಫಿ ಬೆಳೆಗಾರರು ಒತ್ತುವರಿದಾರರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು, ಜೀವನಾಧಾರಕ್ಕಾಗಿ ನಡೆಸುತ್ತಿರುವ ಕೃಷಿ ಭೂಮಿ ಯಾವಾಗ ಕಳೆದುಕೊಳ್ಳುತ್ತೇವೆಯೋ ಎಂಬ ಭಯದ ನಡುವೆ ಜೀವನ ಸಾಗಿಸುವಂತಾಗಿದೆ.

ಕ್ಷೇತ್ರದಲ್ಲಿ ಸುಮಾರು 9 ಸಾವಿರ ಎಕರೆ ಪ್ರದೇಶವು ಒತ್ತುವರಿಗೆ ಒಳಪಟ್ಟಿದೆ ಎಂದು ಗುರುತಿಸಲಾಗಿದೆ. ಈ ಪ್ರದೇ
ಶದಲ್ಲಿ ಸುಮಾರು 10,600 ಕುಟುಂಬ ಕೃಷಿ ನಡೆಸುತ್ತಿದ್ದು, ಅದರಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಒಂದು ಎಕರೆಗಿಂತಲೂ ಕಡಿಮೆ ಪ್ರದೇಶವನ್ನು ಹೊಂದಿದವರಾಗಿದ್ದಾರೆ. ಇದಲ್ಲದೇ ಕಳಸ ಗ್ರಾಮದ ಇನಾಂ ಭೂಮಿ
ಯಲ್ಲಿ 14360 ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಅದರಲ್ಲಿ 6777 ಎಕರೆ ಪ್ರದೇಶವು ಕೃಷಿಗೆ ಒಳಪಟ್ಟಿದೆ. ಈ ಎಲ್ಲ ಕೃಷಿ ಭೂಮಿಯ ತೆರವನ್ನು ತಡೆಯುವುದೇ ಪ್ರಸಕ್ತ ಶಾಸಕರ ಸವಾಲು.

ADVERTISEMENT

2004 ರ ವರೆಗೂ ಒತ್ತುವರಿ ಎಂಬುದು ಕ್ಷೇತ್ರದಲ್ಲಿ ಸಮಸ್ಯೆಯಾಗಿ ಪರಿಣಮಿಸಿರಲಿಲ್ಲ. ಆದರೆ 2004ರಲ್ಲಿ ಸುಪ್ರೀಂ ಕೋರ್ಟ್‌ ಆದೇಶದನ್ವಯ ತತ್ಕೊಳ, ಸಾರಗೋಡು, ಮಸಗಲಿ ಪ್ರದೇಶಗಳ ಒತ್ತುವರಿ ತೆರವು ಕಾರ್ಯಚರಣೆ ನಡೆದ ಬಳಿಕ, ರೈತರು ತಮ್ಮ ಕೃಷಿ ಭೂಮಿಯನ್ನು ಇಂದಲ್ಲಾ ನಾಳೆ ಕಳೆದುಕೊಳ್ಳುತ್ತೇವೆ ಎಂಬ ಭೀತಿಯಲ್ಲಿ ಬದುಕುವಂತಾಗಿದ್ದು, ಅರಣ್ಯ ಇಲಾಖೆ ನೋಟಿಸ್‌ ನೀಡುತ್ತಿದ್ದಂತೆ ನಾಲ್ಕಕ್ಕೂ ಅಧಿಕ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಗತಿಸಿವೆ. ಅಂದಿನಿಂದ ಇಂದಿನವರೆಗೂ ಶಾಸಕ ಸ್ಥಾನ ಅಲಂಕರಿಸಿದವರೆಲ್ಲಾ ಒತ್ತುವರಿ ಭೂಮಿ ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆಯೇ ಹೊರತು, ಶಾಶ್ವತ ಕಾನೂನು ರೂಪಿಸಲು ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ. ಒತ್ತುವರಿ ಸಮಸ್ಯೆಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಕಾನೂನು ಜಾರಿಯಾಗಬೇಕು ಎಂಬ ಕಾರಣವೂ ಈ ವಿಫಲತೆಗೆ ಕಾರಣವಾಗಿದೆ.

ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರ ಅವಧಿಯಲ್ಲಿ ಇನಾಂ ಭೂಮಿ ತೆರವಿಗಾಗಿ ಅರಣ್ಯ ಇಲಾಖೆ ಕಾರ್ಯಾಚ
ರಣೆಗೆ ಸಿದ್ಧವಾಗಿದ್ದಾಗ, ಸ್ಥಳಕ್ಕೆ ಬಂಇದ್ದ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಥಳೀಯ ನಾಯಕ
ರೊಂದಿಗೆ ರಸ್ತೆಯಲ್ಲಿ ಧರಣಿ ನಡೆಸಿ ಕಾರ್ಯಾಚರಣೆ ತಡೆದಿದ್ದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಡೆಯ ಬಜೆಟ್‌ನಲ್ಲಿ ಒತ್ತುವರಿ ಪ್ರದೇಶವನ್ನು ಕೇರಳ ಮಾದರಿಯಲ್ಲಿ ಬೆಳೆಗಾರರಿಗೆ ಗುತ್ತಿಗೆ ನೀಡುವ ಬಗ್ಗೆ ಪ್ರಸ್ತಾವನೆ ಇಟ್ಟಿದ್ದರು. ಇದೀಗ ಇಬ್ಬರೂ ಸೇರಿ ಸರ್ಕಾರ ರಚಿಸಿದ್ದು, ಈ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲೂ ಒತ್ತುವರಿ ತೆರವು ತಡೆ ವಿಷಯವಿರುವುದರಿಂದ ಈ ಬಾರಿಯ ಶಾಸಕರು ಸುಲಭವಾಗಿ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿ ಮನೆ ಮಾಡಿದೆ.

**
ಇನಾಂ ಭೂಮಿ ತೆರವಿನ ಕಾರ್ಯಾಚರಣೆಯ ವೇಳೆ ರಸ್ತೆಗಿಳಿದಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತುವರಿ ಸಮಸ್ಯೆ ಹತ್ತಿರದಿಂದ ಕಂಡಿದ್ದು, ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಿದೆ
– ಬಾಲಕೃಷ್ಣ, ಅಧ್ಯಕ್ಷರು, ತಾಲ್ಲೂಕು ಬೆಳೆಗಾರರ ಸಂಘ 

**
ಕಾಂಗ್ರೆಸ್‌ ಸರ್ಕಾರ ಕಡೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಒತ್ತುವರಿ ಪ್ರದೇಶವನ್ನು ಬೆಳೆಗಾರರಿಗೆ ಗುತ್ತಿಗೆ ನೀಡುವ ಪದ್ಧತಿಗೆ ಕಾನೂನು ರೂಪಿಸಿ ರೈತರಿಗೆ ನೆರವಾಗಬೇಕು
– ಬಿ.ಎಸ್‌. ಜಯರಾಂ, ಅಧ್ಯಕ್ಷರು, ರಾಜ್ಯ ಬೆಳೆಗಾರರ ಒಕ್ಕೂಟ 

ಕೆ. ವಾಸುದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.