ADVERTISEMENT

ಕಪ್ಪೆ ಶಂಕರ ದೇವಾಲಯ ಮುಳುಗಡೆ

ಶೃಂಗೇರಿಯಲ್ಲಿ ಎಂದೆಂದೂ ಕಾಣದ ತುಂಗಾನದಿಯ ಪ್ರವಾಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:20 IST
Last Updated 15 ಜೂನ್ 2018, 11:20 IST

ಶೃಂಗೇರಿ: ಮುಂಗಾರು ಮಳೆಗೆ ಶೃಂಗೇರಿ ಅಕ್ಷರಶಃ ಜಲಾವೃತವಾಗಿದೆ. ಪಟ್ಟಣದ ಬಹುತೇಕ ರಸ್ತೆಗಳು ನೀರಿನಿಂದ ತುಂಬಿ ಸಂಪರ್ಕ ಕಡಿತಗೊಂಡಿವೆ. ‘ಕರ್ನಾಟಕದ ಚಿರಾಪುಂಜಿ’ ಎಂದು ಹೆಸರಾದ ಆಗುಂಬೆಯನ್ನು ಮೀರಿಸಿ ಶೃಂಗೇರಿಯಲ್ಲಿ ಮಳೆ ಸುರಿದಿದೆ. ಮಳೆಯ ಕಾರಣ ಶುಕ್ರವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತುಂಗಾನದಿ ಉಕ್ಕಿ ಹರಿದು ಶಾರದ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿಯವರ ಸ್ನಾನ ಘಟ್ಟ ಹಾಗೂ ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರ ದೇವಾಲಯ ಮುಳುಗಿದೆ. ತುಂಗೆ ಉಕ್ಕಿ ಹರಿದು ಕೇವಲ 4 ಅಡಿ ನೀರು ಎತ್ತರಕ್ಕೆ ಬಂದರೆ ದೇವಸ್ಥಾನ ಅಂಗಳಕ್ಕೆ ನೀರು ಬಂದು ಇಡೀ ಶೃಂಗೇರಿಯ ಮುಖ್ಯಬೀದಿಗಳಲ್ಲಿ ಪ್ರವಾಹ ಎದುರಾಗುತ್ತಿತ್ತು. ನದಿ ಉಕ್ಕಿ ಹರಿಯುವಾಗ ಕಾಳಿಂಗ ಸರ್ಪದಂತಹ ಜೀವ ಜಂತುಗಳು, ಮರದ ದಿಮ್ಮಿಗಳು ತೆಲಾಡುತ್ತಿದ್ದವು.

ತಾಲ್ಲೂಕಿನ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದೆ. ಹಳ್ಳಕೊಳ್ಳಗಳು, ಭತ್ತದಗದ್ದೆಗಳು ನೀರಿನಿಂದ ಆವೃತ್ತಗೊಂಡಿದೆ. ಶೃಂಗೇರಿಯ ಸೊಬಗನ್ನು ಸವಿಯಲು ಹಾಗೂ ಶಾರದಾ ಪೀಠದ ದರ್ಶನ ಪಡೆಯಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಈ ಭೀಕರ ಮಳೆಯಿಂದ ಶೃಂಗೇರಿಗೆ ಪ್ರವಾಸಿಗರ ಮಾರ್ಗವಾಗಿರುವ ಮೆಣಸೆಯಿಂದ ಚಿಕ್ಕಮಗಳೂರು ಮಾರ್ಗ, ನೆಮ್ಮಾರ್‍ಯಿಂದ ಮಂಗ ಳೂರು ಮಾರ್ಗ, ಕಾವಡಿಯಿಂದ ಶಿವಮೊಗ್ಗ ಮಾರ್ಗ ಹಾಗೂ ಹೊಳೆಕೊಪ್ಪದಿಂದ ತೀರ್ಥಹಳ್ಳಿ ಮಾರ್ಗ ಸಂಪೂರ್ಣ ನೀರಿನಿಂದ ಮುಳುಗಿ ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದರಿಂದ ಶೃಂಗೇರಿ ಪ್ರವಾಸಿಗರಿಲ್ಲದೆ ಬಿಕೊ ಎನ್ನುತ್ತಿದೆ.

ADVERTISEMENT

ಶೃಂಗೇರಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 1094.2 ಮಿಲಿ ಮೀಟರ್ ಮಳೆ ಸುರಿದಿದೆ. ಗುರುವಾರ 116.0 ಮಿಲಿ ಮೀಟರ್ ಮಳೆಯಾಗಿದೆ. ಪಟ್ಟಣ ದಲ್ಲಿ ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗಿದೆ.

ಮಳೆಯಿಂದ ಹಲವು ಕಡೆ ನೀರಿನಿಂದ ಆವೃತ್ತಗೊಂಡು ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಭಾರತಿ ಬೀದಿ, ಆನೆಗುಂದ ರಸ್ತೆ, ಗಾಂಧಿ ಮೈದಾನ, ಹಾಲಂದೂರು ರಸ್ತೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಪ್ರಮುಖ ರಸ್ತೆಗಳಾದ ಕೊಪ್ಪ ಶಿವಮೊಗ್ಗ ಮಾರ್ಗದ ರಸ್ತೆ, ತೆಕ್ಕೂರು ಮಾರ್ಗದ ಕಲ್ಕಟ್ಟೆಯ ರಸ್ತೆ ನೀರಿನಿಂದ ಮುಳುಗಿದೆ. ರಾಜಾನಗರದಲ್ಲಿ ಶ್ರೀನಿವಾಸ್ ಎಂಬವರ ಧರೆ ಕುಸಿದು ಗೋಡೆ ಶಿಥಿಲಗೊಂಡಿದೆ.

ಮರ್ಕಲ್ ಗ್ರಾಮದಲ್ಲಿ ರಾಜಶೇಖರ್ ಮನೆಯ ಕೊಟ್ಟಿಗೆ ಕುಸಿದಿದೆ. ಮಲ್ನಾಡ್ ಗ್ರಾಮದ ಹಿಂಬಿಗೆಯಲ್ಲಿ ದೊಡ್ಡ ಹಳ್ಳದ ಕಾಲುಸಂಕ ಕೊಚ್ಚಿಕೊಂಡು ಹೋಗಿದೆ. ನೆಮ್ಮಾರ್‍ನ ಸರ್ವೇಶ್ವರ ದೇವಸ್ಥಾನದ ಬಳಿ ಧರೆ ಕುಸಿದು ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಬಾರಿ ಮಳೆಯಿಂದ ಕುರಬಕೇರಿಯ ಕೆಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದ್ದು ಅಲ್ಲಿನ ಜನರನ್ನು ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ ತಾತ್ಕಾ ಲಿಕ ವಸತಿ ಮತ್ತು ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ .ಗೌರಿಶಂಕರ್ ಸಭಾಂಗಣದಲ್ಲಿ ಪ್ರವಾಹದಿಂದ ನೊಂದ ಸಂತ್ರಸ್ತರಿಗೆ ಗಂಜಿಕೇಂದ್ರ ಸ್ಥಾಪಿಸಲಾಗಿದೆ.

ಮಳೆಯಿಂದ ತೋಟಗಳಲ್ಲಿ ನೀರು ತುಂಬಿಕೊಂಡು ಕಾಲಕಾಲಕ್ಕೆ ತೋಟಗಾರಿಕೆ ಬೆಳೆಗಳಿಗೆ ಬೋರ್ಡೋ, ಗೊಬ್ಬರಗಳನ್ನು ನೀಡಬೇಕಾಗಿರುವ ರೈತರಿಗೆ ಮಳೆ ಅಡ್ಡಿ ಉಂಟು ಮಾಡುತ್ತಿದೆ. ಇದರಿಂದ ತೋಟಗಳಲ್ಲಿ ಅಡಿಕೆಗೆ ಕೊಳೆರೋಗ ಕಾಳು ಮೆಣಸಿಗೆ ಸೊರಗು ರೋಗ ಬರುವ ಸಾಧ್ಯತೆ ಇದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.