ADVERTISEMENT

ಖಾಸಗಿ ಆಸ್ಪತ್ರೆಗಳು ಬಂದ್‌: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:03 IST
Last Updated 14 ನವೆಂಬರ್ 2017, 6:03 IST

ಚಿಕ್ಕಮಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿ ಮಸೂದೆಯ ಕೆಲ ಅಂಶಗಳನ್ನು ಕೈಬಿಡಬೇಕು ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರ ‘ಬೆಳಗಾವಿ ಚಲೋ’ ತೆರಳಿದ್ದರಿಂದ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಯಿತು.

ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರದ ಗಮನಸೆಳೆಯಲು ‘ಬೆಳಗಾವಿ ಚಲೋ’ದಲ್ಲಿ ಭಾಗವಹಿಸಲು ಭಾನುವಾರ ರಾತ್ರಿ ಬೆಳಗಾವಿಗೆ ತೆರಳಿದರು. ಸೋಮವಾರ ಬೆಳಿಗ್ಗೆಯಿಂದ ಖಾಸಗಿ ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿತ್ತು.

ಚಿಕಿತ್ಸೆ, ವೈದ್ಯಕೀಯ ಸೇವೆ ಲಭ್ಯ ಇಲ್ಲ ಎಂಬ ಫಲಕಗಳನ್ನು ಬಾಗಿಲು, ಗೇಟುಗಳಲ್ಲಿ ಹಾಕಲಾಗಿತ್ತು. ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚು ಇತ್ತು. ಹೋರರೋಗಿ ಮತ್ತು ಒಳರೋಗಿ ವಿಭಾಗದಲ್ಲಿ ರೋಗಿಗಳ ಸಾಲುಗಟ್ಟಿ ನಿಂತಿದ್ದರು.

ADVERTISEMENT

ಜಿಲ್ಲಾಸ್ಪತ್ರೆಯ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ದೊಡ್ಡಮಲ್ಲಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಶೇ 40 ಜಾಸ್ತಿ ಇತ್ತು. ಹೋರರೋಗಿ ವಿಭಾಗ, ಇಂಜೆಕ್ಷನ್‌ ವಿಭಾಗದಲ್ಲಿ ನಿಲ್ಲಲೂ ಜಾಗ ಇರಲಿಲ್ಲ’ ಎಂದು ಹೇಳಿದರು.

‘ಒಳರೋಗಿ ವಿಭಾಗದಲ್ಲೂ ದಟ್ಟಣೆ ಜಾಸ್ತಿ ಇತ್ತು. ಎಲ್ಲ ಹಾಸಿಗೆಗಳು ಭರ್ತಿಯಾಗಿದ್ದವು. ಗುಣಮುಖರಾಗಿದ್ದ ಕೆಲವರನ್ನು ಬಿಡುಗಡೆಗೊಳಿಸಿ, ಕೆಲವರಿಗೆ ಹಾಸಿಗೆ ಒದಗಿಸಲಾಯಿತು. ಸ್ಥಳಾವಕಾಶ ಇದ್ದ ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ಹೇಳಿದರು.

‘ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿದ್ದ ದೇವಗೊಂಡನಹಳ್ಳಿಯ ತಿಮ್ಮಮ್ಮ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಬೆಳಿಗ್ಗೆ 6 ಗಂಟೆ ವೇಳೆಗೆ ಈ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದರು. ಇಲ್ಲಿ ಅವರಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು’ ಎಂದು ತಿಳಿಸಿದರು.

ಮೂಡಿಗೆರೆ: ಖಾಸಗಿ ವೈದ್ಯರು ಮುಷ್ಕರದಲ್ಲಿ ಬಾಗಿ
ಮೂಡಿಗೆರೆ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿಯನ್ನು ವಿರೋಧಿಸಿ ವೈದ್ಯರ ಸಂಘ ಕರೆ ನೀಡಿರುವ ‘ಬೆಳಗಾವಿ ಚಲೋ’ ಪ್ರತಿಭಟನೆಗೆ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೈದ್ಯರ ಸಂಘ ಕರೆಯ ತಾಲ್ಲೂಕಿನಾದ್ಯಂತ ಖಾಸಗಿ ಆಸ್ಪತ್ರೆಗಳು ಸೋಮವಾರ ಬಂದ್‌ ಆಗಿದ್ದವು. ವೈದ್ಯರ ಪ್ರತಿಭಟನೆಗೆ ಬೆಂಬಲವಾಗಿ ತಾಲ್ಲೂಕು ಕೇಂದ್ರದಲ್ಲಿರುವ ಖಾಸಗಿ ವೈದ್ಯಕೀಯ ಪ್ರಯೋಗಾಲಯಗಳು, ಸ್ಕಾನಿಂಗ್‌ ಸೆಂಟರ್‌ಗಳು ಕೂಡ ಬಾಗಿಲು ಮುಚ್ಚಿದ್ದವು.

ಮುಷ್ಕರದ ಹಿನ್ನೆಲೆಯಲ್ಲಿ ಗೋಣಿಬೀಡು, ಬಣಕಲ್‌, ಕೊಟ್ಟಿಗೆಹಾರದಲ್ಲಿರುವ ಖಾಸಗಿ ಕ್ಲಿನಿಕ್‌ಗಳು ಸಹ ಬಾಗಿಲು ಮುಚ್ಚಿದ್ದು, ಇದೇ 16 ರವರೆಗೂ ಮುಷ್ಕರ ನಡೆಯಲಿದೆ ಎಂದು ನಾಮಫಲಕ ಕೂಡ ಅಳವಡಿಸಲಾಗಿದೆ.

ರೋಗಿಗಳ ಪರದಾಟ
ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಸೋಮವಾರ ರೋಗಿಗಳು ಪರದಾಡಿದರು. ಅದರಲ್ಲೂ ಗರ್ಭಿಣಿಯರು ಪ್ರಸೂತಿ ತಜ್ಞರಿಲ್ಲದ ಕಾರಣ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು. ವೈದ್ಯರ ಮುಷ್ಕರದ ಅರಿವಿಲ್ಲದ ಗ್ರಾಮೀಣ ಪ್ರದೇಶದ ಜನರು, ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಮುಷ್ಕರದ ಮಾಹಿತಿ ಲಭಿಸಿದ ನಂತರ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರು.

ಪಟ್ಟಣದ ಎಂಜಿಎಂ ಆಸ್ಪತ್ರೆ ಸೇರಿದಂತೆ, ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ‘

ಗ್ರಾಮೀಣ ಪ್ರದೇಶಗಳಲ್ಲಿನ ರೋಗಿಗಳನ್ನು ಕರೆತರಲು ಅಂಬ್ಯುಲೆನ್ಸ್‌ ಕೂಡ ಸನ್ನದ್ಧವಾಗಿದ್ದು, ಯಾವುದೇ ಸಮಸ್ಯೆಯಿದ್ದರೂ ರೋಗಿಗಳು ದಿನದ 24 ಗಂಟೆಯೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಂದ್ರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.