ADVERTISEMENT

ನಾಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:09 IST
Last Updated 11 ಜನವರಿ 2017, 11:09 IST

ಕಡೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ರಂಗೇರಿದ್ದು, ಇದೇ 12ರಂದು ಚುನಾವಣೆ ನಡೆಯಲಿದೆ. 13 ನಿರ್ದೇಶಕ ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 11 ಸ್ಥಾನಗಳಿಗೆ ಕಸರತ್ತು ನಡೆಯುತ್ತಿದ್ದು, 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 11ಸ್ಥಾನಗಳ ಪೈಕಿ 9 ಕಡೂರು ಮತ್ತು 2 ಕ್ಷೇತ್ರಗಳು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ.

ವಾರ್ಷಿಕ ₹1.50 ಕೋಟಿ ವ್ಯವ ಹಾರ ನಡೆಸುವ ಕಡೂರು ಎಪಿಎಂಸಿ ಯಲ್ಲಿ  ರಾಗಿ, ಜೋಳ, ಶೇಂಗಾ, ಸೂರ್ಯಕಾಂತಿ, ತೆಂಗಿನಕಾಯಿಯ ವಹಿವಾಟು ನಡೆಯುತ್ತದೆ. ಇದಲ್ಲದೆ ಪ್ರತೀ ದಿನವೂ ತರಕಾರಿ ವ್ಯಾಪಾರ, ಸ್ವಲ್ಪ ಮಟ್ಟದಲ್ಲಿ ಈರುಳ್ಳಿ ಮತ್ತು ಹತ್ತಿ ವ್ಯಾಪಾರವೂ ನಡೆಯುತ್ತದೆ. ಬೀರೂರು ಉಪಮಾರುಕಟ್ಟೆಯಲ್ಲಿ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೋ ಅಡಿಕೆ ವ್ಯವಹಾರ ನಡೆಸುತ್ತದೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯೂ ಅಡಿಕೆ.

ಎಪಿಎಂಸಿ ಚುನಾವಣೆ ಪಕ್ಷರಹಿತವಾಗಿದ್ದರೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ತೀವ್ರಗತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹಿಂದಿನ ಆಡಳಿತ ಸಮಿತಿಯಲ್ಲಿದ್ದ ಕೆಲವರು ಪುನರಾಯ್ಕೆ ಬಯಸಿ ಚುನಾವಣೆಗೆ ಮತ್ತೆ ಸ್ಪರ್ದಿಸಿದ್ದರೆ ಹಲವು ಮಾಜಿ ನಿರ್ದೇಶಕರು ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪ್ರಮುಖವಾಗಿ ಬಿಸಿಲೆರೆ ಕ್ಷೇತ್ರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ. ಮಹೇಶ್ವರಪ್ಪ (ಜೆಡಿಎಸ್ ಬೆಂಬಲಿತ) ಮತ್ತು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಆರ್.ಓಂಕಾರಪ್ಪ( ಕಾಂಗ್ರೆಸ್ ಬೆಂಬಲಿತ) ಸ್ಪರ್ಧೆಯಲ್ಲಿದ್ದರೆ ಹೆಚ್ಚು ಕುತೂಹಲ ಕೆರಳಿಸಿರುವ ಮಲ್ಲೇಶ್ವರ ಕ್ಷೇತ್ರದಲ್ಲಿ ಕಡೂರು ಪುರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಂ. ಮೋಹನ್ ಕುಮಾರ್(ಮುದ್ದ) ಕಾಂಗ್ರೆಸ್ ಬೆಂಬಲಿತ  ಹಾಗೂ ಪುರಸಭೆಯ ಮಾಜಿ ಸದಸ್ಯ ಕೆ.ಎಚ್.ಲಕ್ಕಣ್ಣ(ಜೆಡಿಎಸ್ ಬೆಂಬ ಲಿತ ) ವೇದಮೂರ್ತಿ(ಬಿಜೆಪಿ ಬೆಂಬ ಲಿತ) ಕಣದಲ್ಲಿದ್ದಾರೆ.

ಉಳಿದಂತೆ ಎಪಿಎಂಸಿ ಮಾಜಿ ನಿರ್ದೇಶಕ ಎಚ್.ಎಂ. ರೇವಣ್ಣಯ್ಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾಗಿ ಪಂಚನಹಳ್ಳಿ ಸಾಮಾನ್ಯ ಕ್ಷೇತ್ರ ದಿಂದ, ಸರಸ್ವತೀಪುರ ಎಸ್ಸಿ ಮೀಸಲು ಕ್ಷೇತ್ರದಿಂದ ಚೆನ್ನವೀರಪ್ಪ(ಜೆಡಿಎಸ್ ಬೆಂಬಲಿತ), ಆರ್.ಎಂ. ಬಸವರಾಜು (ಕಾಂಗ್ರೆಸ್ ಬೆಂಬಲಿತ) ಸ್ಪರ್ಧಿಸಿದ್ದರೆ ಮಲ್ಲೇಶ್ವರದಿಂದ ವಕೀಲರ ಸಂಘದ ಉಪಾಧ್ಯಕ್ಷ ಹುಲ್ಲೇ ಹಳ್ಳಿ ರಾಜಶೇಖರ್, ಮತ್ತಿಘಟ್ಟ ಕ್ಷೇತ್ರದಿಂದ ಪುಟ್ಟಸ್ವಾಮಿ ಕಣದಲ್ಲಿರುವ ಪ್ರಮುಖರು.

ಒಟ್ಟಾರೆಯಾಗಿ ಜೆಡಿಎಸ್ 8, ಬಿಜೆಪಿ 11 ಮತ್ತು ಕಾಂಗ್ರೆಸ್ 10 ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT