ADVERTISEMENT

ನೋಟು ಅಮಾನ್ಯ ಖಂಡಿಸಿ ಕಾಂಗ್ರೆಸ್‌ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:26 IST
Last Updated 10 ನವೆಂಬರ್ 2017, 6:26 IST

ಕಳಸ: ದೇಶದ ಹಣಕಾಸು ಸಚಿವರನ್ನು ಬದಿಗೊತ್ತಿ ಸಂವಿಧಾನಕ್ಕೆ ಅವಮಾನ ಆಗುವಂತೆ ದೇಶದ ಪ್ರಧಾನಿ ನೋಟುಗಳ ಅಮಾನ್ಯ ಮಾಡುವ ಆತುರದ ತೀರ್ಮಾನ ತೆಗೆದುಕೊಂಡರು. ಇದರಿಂದ ದೇಶದ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ವ್ಯಾಪಾರ ವಹಿವಾಟು ಮತ್ತು ಕೃಷಿ ನೆಲಕಚ್ಚಿದೆ ಎಂದು ಕೆಪಿಸಿಸಿ ಸದಸ್ಯ ಬಿ. ಎಲ್‌. ರಾಮದಾಸ್‌ ಟೀಕಿಸಿದರು.

ನೋಟು ಅಮಾನ್ಯಗೊಂಡು ವರ್ಷ ಸಂದ ಪ್ರಯುಕ್ತ ಪಟ್ಟಣದಲ್ಲಿ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದ ನಂತರ ಕೆ.ಎಂ. ರಸ್ತೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ವಿದೇಶದಲ್ಲಿ ಎದೆಯುಬ್ಬಿಸಿ ಭಾಷಣ ಮಾಡುವ ಮೋದಿಗೆ ಸಂಸತ್ತಿನಲ್ಲಿ ಸಂಸದರನ್ನು ಎದುರಿಸಲು ಧೈರ್ಯ ಸಾಲದಾಗಿದೆ. ದೇಶದ ಇಂದಿನ ಆರ್ಥಿಕ ಸ್ಥಿತಿಯನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ‘ಕರಾಳ’ ಎಂದು ಬಣ್ಣಿಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಕರಾಳ ದಿನ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌. ಪ್ರಭಾಕರ್‌ ಮಾತನಾಡಿ, ‘ನೋಟು ಅಮಾನ್ಯದಿಂದ ಆಗುವ ತೊಂದರೆ ತಾತ್ಕಾಲಿಕ ಮತ್ತು 100 ದಿನದಲ್ಲಿ ಸರಿ ಆಗುತ್ತದೆ ಎಂಬ ಪ್ರಧಾನಿಯ ಭರವಸೆ ಸುಳ್ಳಾಗಿದೆ.

ದೇಶದ ಯಾವುದೇ ಉದ್ಯಮಕ್ಕೂ ಹಣ ಲಭ್ಯವಾಗುತ್ತಿಲ್ಲ. ದೇಶವನ್ನೇ ಕತ್ತಲಿಗೆ ನೂಕಿದ ಕೇಂದ್ರ ಸರ್ಕಾರವನ್ನು ಎಚ್ಚರಿಸಲು ಪಂಜಿನ ಮೆರವಣಿಗೆ ಮಾಡಲಾಗಿದೆ’ ಎಂದರು.
ಪಕ್ಷದ ಮುಖಂಡರಾದ ದೇವದಾಸ್‌, ಶುಕೂರ್‌, ಶ್ರೇಣಿಕ, ವಿಶ್ವನಾಥ್‌, ರಿಜ್ವಾನ್‌, ಮಹೇಶ್‌, ಗಣೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.