ADVERTISEMENT

ಮೀನುಗಾರಿಕೆಗೆ ಬರಗಾಲದ ಬರೆ!

ಕೆರೆಕಟ್ಟೆಗಳು, ನದಿಗಳು ಬತ್ತಿ ಮೀನುಗಾರರರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 5:50 IST
Last Updated 14 ಜನವರಿ 2017, 5:50 IST
ಮೀನುಗಾರಿಕೆಗೆ ಬರಗಾಲದ ಬರೆ!
ಮೀನುಗಾರಿಕೆಗೆ ಬರಗಾಲದ ಬರೆ!   
ಚಿಕ್ಕಮಗಳೂರು: ನಾಲ್ಕೈದು ವರ್ಷ ಗಳಿಂದ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಯಿಂದ ರಾಜ್ಯ ಸರ್ಕಾರ ಘೋಷಿಸಿರುವ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ 4 ತಾಲ್ಲೂಕುಗಳನ್ನು ಸೇರಿಸಲಾ ಗಿದೆ. ಮಳೆರಾಯನ ಮುನಿಸು ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕಾಳುಮೆಣಸು, ಭತ್ತ ಸೇರಿದಂತೆ ಇನ್ನಿತರೆ ಬೆಳೆಗಳ ಉತ್ಪಾದನೆ ಕುಂಠಿತಗೊಳಿಸಿದೆ. ಮಾತ್ರವಲ್ಲದೆ, ಜಲಚರ ಜೀವಿಗಳ ಮೇಲೂ ಪ್ರಭಾವ ಬೀರಿದೆ. ಮೀನು ಗಾರಿಕೆ ಇಲಾಖೆಯ ಮತ್ಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆರೆಕಟ್ಟೆಗಳು, ನದಿಗಳು ಬತ್ತಿ ಮೀನುಗಾರರರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತಾಗಿದೆ.
 
ಜಿಲ್ಲೆಯಲ್ಲಿ 7 ತಾಲ್ಲೂಕು ಮಟ್ಟದ ಮೀನುಮರಿ ಪಾಲನಾ ಕೇಂದ್ರಗಳಿವೆ. 2014–15ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಮೀನು ಸಾಕಣೆಗೆ ಒಟ್ಟು 84 ಕೆರೆಗಳಲ್ಲಿ 74 ಕೆರೆಗಳನ್ನು ಅಭಿವೃದ್ಧಿ ಪಡಿಸಿಲಾಗಿತ್ತು. ಅವುಗಳಲ್ಲಿ ಒಟ್ಟು 5,700 ಹೆಕ್ಟೇರ್‌ ಜಲ ವಿಸ್ತೀರ್ಣ ಗುರುತಿಸಲಾಗಿತ್ತು. ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳಿಗೆ 83.17ಲಕ್ಷ ಮೀನು ಮರಿಗಳನ್ನು ಸಾಕಣೆಗೆ ಸಂಗ್ರಹಿಸಲಾ ಗಿತ್ತು. ಅವುಗಳಲ್ಲಿ 85 ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿತ್ತು. 61 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. 7.67 ಲಕ್ಷ ಮೀನು ಮರಿಗಳನ್ನು ಸಾಕಾಣಿಕೆಗೆ ಬಿಡಲಾಗಿತ್ತು. ಜಿಲ್ಲೆಯ 2 ಜಲಾಶಯಗಳಾದ ಭದ್ರಾ ಹಾಗೂ ಜಂಬದಹಳ್ಳಿ ಜಲಾಶಯಗಳಿಗೆ 15 ಲಕ್ಷ ‘ಅಡ್ವಾನ್ಸ್ ಪಿಂಗರ್‌ಲಿಂಗ್ಸ್’ ಜಾತಿ ಮೀನು ಮರಿಗಳನ್ನು ಬಿತ್ತನೆ ಮಾಡ ಲಾಗಿತ್ತು ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.
 
2016–17ನೇ ಸಾಲಿನಲ್ಲಿ ಇಲಾಖೆ ವ್ಯಾಪ್ತಿಯ 86 ಕೆರೆಗಳಲ್ಲಿ 5,700 ಹೆಕ್ಟೇರ್‌ ಮೀನು ಸಾಕಣೆಗೆ ಯೋಗ್ಯ ಜಲಾನಯನ ಪ್ರದೇಶ ಗುರುತಿಸಲಾಗಿತ್ತು. ಪ್ರಸಕ್ತ ಸಾಲಿನ ಮೀನು ಸಾಕಣೆ ಅವಧಿ ಮಾರ್ಚ್‌ ಅಂತ್ಯಕ್ಕೆ 58 ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದು, 63 ಲಕ್ಷ ಮೀನು ಮರಿಗಳನ್ನು ಶೇಖರಿಸಲಾಗಿತ್ತು. ಇವುಗ ಳಲ್ಲಿ ಸುಮಾರು 25 ರಿಂದ 30 ಕೆರೆಗಳಲ್ಲಿ ಮೀನು ಸಾಕಣೆಗೆ ಅಗತ್ಯ ನೀರಿಲ್ಲದೇ ಮತ್ಸ್ಯೋದ್ಯಮ ಕುಂಠಿತಗೊಂಡಿದೆ.
 
ಗ್ರಾಮ ಪಂಚಾಯಿತಿ ವ್ಯಾಪ್ತಿಯ 58 ಕೆರೆಗಳನ್ನು ದುರಸ್ತಿಗೊಳಿಸಿ, 4,753 ಲಕ್ಷ ಮೀನು ಮರಿಗಳನ್ನು ಸಾಕಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅದೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 14.69ಲಕ್ಷ ಮೀನುಮರಿ ಪಾಲನೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 14.84 ಲಕ್ಷ ಮೀನುಮರಿ ಪಾಲನೆಗೆ ಗುರಿ ಹೊಂದಲಾಗಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಮೀನು ಸಾಕಣೆ ಹಾಗೂ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.
 
ಸುಮಾರು 40 ಹೆಕ್ಟೇರ್‌ ವ್ಯಾಪ್ತಿಗೆ ಮೇಲ್ಪಟ್ಟ ಕೆರೆಗಳನ್ನು ಮೀನುಗಾರಿಕೆ ಇಲಾಖೆ ನಿರ್ವಹಿಸುತ್ತದೆ. ಅದಕ್ಕೂ ಕಡಿಮೆ ವ್ಯಾಪ್ತಿಯ ಕೆರೆಗಳನ್ನು ಆಯಾ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ಮಾಡುತ್ತವೆ. ಸರ್ಕಾರ ಮೀನುಗಾರಿಕೆಗೆ ಉತ್ತೇಜನ ನೀಡಲು ಸಬ್ಸಿಡಿ ದರದಲ್ಲಿ ಮೀನುಮರಿ ವಿತರಣೆ, ಮೀನುಗಾರಿಕೆಗೆ ಅಗತ್ಯ ಸಲಕರಣೆ ನೀಡುತ್ತಿದೆ. ಸಾಕಣೆಗೆ ಯೋಗ್ಯವಿರುವ ಮತ್ತು ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುವ ಹುಲ್ಲುಗಂಡೆ, ರೋಹು, ಬೃಗಾಲ್‌, ಹಲ್ಲುಗೆಂಡೆ, ಬೆಳಿಗೆಂಡೆ ಇತ್ಯಾದಿ ತಳಿಯ ಮೀನುಗಳನ್ನು ವಿತರಿ ಸುತ್ತಿದೆ. ಆದರೆ, ಸತತ ಬರಗಾಲದಿಂದ ಮೀನು ಸಾಕಣೆಯಲ್ಲಿ ಹಾಕಿದ್ದ ಬಂಡವಾಳ ಕೈಗೆ ಸಿಗುತ್ತಿಲ್ಲವೆನ್ನುವುದು ಬಹುತೇಕ ಮೀನುಕೃಷಿಕರ ಅಳಲು. 
 
**
2 ವರ್ಷಗಳಿಂದ ತೀವ್ರ ಮಳೆಕೊರತೆಯಿಂದ ಮೀನು ಉತ್ಪಾದನೆ ಕುಂಠಿತವಾಗಿರುವಾಗ ಸಣ್ಣ ಕೃಷಿ ಹೊಂಡಗಳಲ್ಲಿ ಹುಲ್ಲುಗಂಡೆ ಜಾತಿ ಮೀನು ಸಾಕಣೆ ಲಾಭದಾಯಕವಾಗಿದೆ.
-ಶಾಂತಿಪ್ರಿಯ
ಮೀನುಗಾರಿಕೆ ಸಹಾಯಕ ನಿರ್ದೇಶಕ
 
*
ಉತ್ತಮ ಮಳೆಯಾಗಿದ್ದರೆ ವರ್ಷಕ್ಕೆ ಒಂದು ಮೀನು 2 ಕೆ.ಜಿ.ವರೆಗೂ ತೂಗು ತ್ತಿತ್ತು. ಸತತ ಮಳೆ ಕೊರತೆಯಿಂದಾಗಿ ಹೆಬ್ಬೆರಳ ಗಾತ್ರ ಮೀರಿ ಮೀನು ಬೆಳೆದಿಲ್ಲ. ಬಂಡವಾಳ ನಷ್ಟವಾಗಿದೆ.
-ಆರ್‌.ಗೋಪಿ, ಮೀನು ಕೃಷಿಕ
 
*
-ಕೆ.ಸಿ.ಮಣಿಕಂಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.