ADVERTISEMENT

ಯುವ ಜನಾಂಗ ದೇಶದ ಶಕ್ತಿ: ರಂಭಾಪುರಿ ಶ್ರೀ

ರಜತ ಮಹೋತ್ಸವದ ನೆನಪಿಗೆ ಅಂಚೆ ಚೀಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:25 IST
Last Updated 13 ಮಾರ್ಚ್ 2017, 6:25 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ರಂಭಾಪುರಿ ಸ್ವಾಮೀಜಿ ಅವರ ಪೀಠಾರೋಹಣ ರಜತ ಮಹೋತ್ಸವ ಅಂಗವಾಗಿ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ರಂಭಾಪುರಿ ಸ್ವಾಮೀಜಿ ಅವರ ಪೀಠಾರೋಹಣ ರಜತ ಮಹೋತ್ಸವ ಅಂಗವಾಗಿ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.   

ಬಾಳೆಹೊನ್ನೂರು: ಬಾಳೆಗೊಂದು ಗೊನೆಯಿರುವಂತೆ ಬಾಳಿಗೆ ಒಂದು ಉತ್ಕೃಷ್ಟ ಗುರಿಯಿರಬೇಕು. ಸಂಪತ್ತು ಗಳಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣ ಗಳಿಸಿಕೊಂಡು ಬಾಳುವುದು ಶ್ರೇಯಸ್ಕರ. ಯುವ ಜನಾಂಗ ಈ ದೇಶದ ಬಹು ದೊಡ್ಡ ಶಕ್ತಿ ಎಂದು  ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ರಂಭಾಪುರಿ ಪೀಠದಲ್ಲಿ ಭಾನುವಾರ ಜಗದ್ಗುರು ರೇಣುಕಾ ಚಾರ್ಯ ಜಯಂತಿ ಯುಗಮಾನೋ ತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಹಾಗೂ ಪೀಠಾರೋಹಣ ರಜತ ಮಹೋತ್ಸವದ ಅಂಗವಾಗಿ ಜರುಗಿದ ‘ಯುವ ಜನಾಂಗ ದಲ್ಲಿ ಧರ್ಮ ಪ್ರಜ್ಞೆ’  ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಅರ್ಥವಿಲ್ಲದ ಬದುಕು ವ್ಯರ್ಥ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಬಾಳಿದರೆ ಜೀವನ ಸಾರ್ಥಕ. ಯುವ ಜನಾಂಗಕ್ಕೆ ಇತಿ ಹಾಸದ ಅರಿವು ಮೂಡಿಸಬೇಕು. ರಾಷ್ಟ್ರ ಮತ್ತು ಧರ್ಮ ಕಟ್ಟಿ ಬೆಳೆಸುವುದರಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು. ಯುವಕರು ಆಲಸ್ಯ ಮತ್ತು ವ್ಯಸನದಿಂದ ದೂರವಾಗಿ ಸದೃಢ ಸಮಾಜವನ್ನು ಕಟ್ಟಿ ಬೆಳೆಸುವುದರಲ್ಲಿ ಗಟ್ಟಿಯಾದ ಹೆಜ್ಜೆಯನ್ನಿಡುವ ಅವಶ್ಯಕತೆ ಯಿದೆ. ಸಂಪತ್ತು, ಯೌವನ, ಅಧಿಕಾರ ಮತ್ತು ಅವಿವೇಕತನದಿಂದ ದೂರ ಇರಬೇಕು. ಅರಿವುಳ್ಳ ಜನ್ಮದಲ್ಲಿ ಹುಟ್ಟಿದ ಮೇಲೆ ಸಂಸ್ಕಾರವಂತರಾಗಿ ಬಾಳುವುದು ಉತ್ತಮ ಎಂದು ಜಗದ್ಗುರು ರೇಣುಕಾ ಚಾರ್ಯರು ಬೋಧಿಸಿದ್ದಾರೆ ಎಂದರು.

ತರೀಕೆರೆ ಶಾಸಕ ಬಿ.ಎಚ್. ಶ್ರೀನಿವಾಸ್ ‘ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ’ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಜಿ.ಆರ್.ಅರಸ್ ಹಾಗೂ ರಾಜ್ಯ ಚು.ಸಾ.ಪ.ಅಧ್ಯಕ್ಷ ಯಜ್ಞಪುರುಷ ಭಟ್ ಹಾಗೂ ಮೈಸೂರಿನ ಅಂಚೆ ಅಧಿಕಾರಿ ಶಾಂತೇರಾಜೆ ಅರಸ್ ಇವರ ಪ್ರಯತ್ನ ದಿಂದಾಗಿ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳ ಪೀಠಾ ರೋಹಣ ರಜತ ಮಹೋತ್ಸವದ ಸವಿನೆನಪಿನಲ್ಲಿ ಅಂಚೆ ಇಲಾಖೆ ಹೊರ ತಂದ ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಹಾಗೂ ಮೈಸೂರು ಅರಮನೆ ಭಾವಚಿತ್ರ ಹೊಂದಿದ ಐದು ರೂಪಾಯಿ ಮೌಲ್ಯದ ಅಂಚೆ ಚೀಟಿಬಿಡುಗಡೆ ಆಯಿತು.

ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಶಿವಾದ್ವೈತ ದರ್ಪಣ ಕೃತಿ ಬಿಡುಗಡೆ ಮಾಡಿದರು. ಲಕ್ಷ್ಮೇಶ್ವರದ ಮಾಜಿ ಶಾಸಕ ಗಂಗಣ್ಣ ಮಹಂತಶೆಟ್ಟರ ಅವರು ರೇಣುಕ ಗೀತೆ ಗ್ರಂಥ ಬಿಡುಗಡೆ ಮಾಡಿದರು.

ಜಿ.ಎಸ.ಗಡ್ಡದ್ದೇವರಮಠ, ತಾ.ಪಂ. ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ನಂಜುಂಡಶೆಟ್ಟರು, ಕೆ.ಸಿ.ರುದ್ರೇಶ, ಎಸ್.ಆರ್. ರಾಮನಗೌಡ್ರ ಬಿ.ಪಿ. ಐಸಾಮಿಗೌಡರು, ದೇವರಮನೆ ಶಿವಕುಮಾರ್, ಕೆ.ಟಿ.ವೆಂಕಟೇಶ, ಹುಣಸ ಘಟ್ಟದ ಗುರುಮೂರ್ತಿ ಶಿವಾ ಚಾರ್ಯರು, ದೊಡ್ಡಗುಣಿ ರೇವಣಸಿದ್ಧ ಶಿವಾಚಾರ್ಯರು, ಕಲ್ಲುಬಂಡೆಮಠದ ಶಿವಾನಂದ ಶಿವಾಚಾರ್ಯರು, ದೇವಾಪುರದ ಶಿವಮೂರ್ತಿ ಶಿವಾ ಚಾರ್ಯರು, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು ಮತ್ತು ಬೇರುಗಂಡಿಮಠದ ರೇಣುಕ ಮಹಂತ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು.

ಮನುಷ್ಯ ಜೀವನದಲ್ಲಿ ಆದರ್ಶ ಗುರಿ ಹೊಂದಿ ನಡೆದರೆ ಜೀವನ ಸಾರ್ಥಕ. ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ ಇರುವುದಿಲ್ಲ
- ಶಿವಾಚಾರ್ಯ ಭಗವತ್ಪಾದರು, ಹಿಮವತ್ಕೇದಾರ ಭೀಮಾಶಂಕರಲಿಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT