ADVERTISEMENT

‘ರಕ್ತ ಕೊಟ್ಟೇವು, ಜಮೀನು ಬಿಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:47 IST
Last Updated 12 ಸೆಪ್ಟೆಂಬರ್ 2017, 8:47 IST

ಚಿಕ್ಕಮಗಳೂರು: ಮಸಗಲಿ ಅರಣ್ಯ ವ್ಯಾಪ್ತಿಯ ಏಳು ಗ್ರಾಮಗಳ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು, ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಜಮೀನನ್ನು ಉಳಿಸಿಕೊಡಬೇಕು ಎಂದು ಮಸಗಲಿ ಅರಣ್ಯ ವ್ಯಾಪ್ತಿಯ ನಿರಾಶ್ರಿತ ರೈತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆಜಾದ್‌ ಪಾರ್ಕ್‌ ವೃತ್ತದವರೆಗೆ ಕಾಫಿ ಗಿಡಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ‘ರಕ್ತ ಕೊಟ್ಟೇವು ಜಮೀನು ಬಿಡುವುದಿಲ್ಲ’ ಎಂದು ಘೋಷಣೆ ಕೂಗಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾರವಳ್ಳಿ ಗ್ರಾಮದ ತೋಟದ ಕಾಲೋನಿ, ಹೊರಕೆರೆ, ಕೊಂಡದಖಾನ್, ಹೊಲದಗದ್ದೆ, ಗಾಜಿಕೆರೆ ಕಾಲೋನಿ, ಬರಣಗೋಡು, ಕರಗೂರುಗಳಲ್ಲಿ 211 ರೈತ ಕುಟುಂಬಗಳು 374 ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿವೆ. ಸರ್ಕಾರದ ವತಿಯಿಂದ ಮನೆ, ನೀರು, ವಿದ್ಯುತ್‌, ರಸ್ತೆ ಮೂಲಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ADVERTISEMENT

ಮಸಗಲಿ ಅರಣ್ಯ 5,614 ಎಕರೆ ವ್ಯಾಪ್ತಿ ಹೊಂದಿದೆ. ಈ ಪೈಕಿ 1400 ಎಕರೆ ಜಾಗ ಪ್ರಭಾವಿ ಕಾಫಿ ಬೆಳೆಗಾರರೊಬ್ಬರಿಗೆ ಸೇರಿದೆ. 986 ಎಕರೆಯನ್ನು ಈ ಬೆಳೆಗಾರನಿಗೆ ಉಳಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಸಿಪಿಐ ಜಿಲ್ಲಾ ಸಂಚಾಲಕ ಎಚ್‌.ಎಂ.ರೇಣುಕಾರಾಧ್ಯ ಮಾತನಾಡಿ, ‘ರೈತರ ಜಮೀನು ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸುತ್ತಿರುವುದು ಜಿಲ್ಲೆಯಲ್ಲಿ ಇದೇನು ಹೊಸದಲ್ಲ. ಶಾಸಕರು ಮತ್ತು ಸಂಸದರು ನಿರಾಶ್ರಿತ ರೈತರೊಂದಿಗೆ ಚರ್ಚಿಸಬೇಕು.

ಕೋರ್ಟ್‌ ಮತ್ತು ಕೇಂದ್ರ ಸರ್ಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ನಡೆಸಿದರೆ ಮಸಗಲಿ ಅರಣ್ಯ ಒತ್ತುವರಿ ತೆರವು ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ’ ಎಂದರು.

ಮಸಗಲಿ ಅರಣ್ಯ ವ್ಯಾಪ್ತಿಯ ನಿರಾಶ್ರಿತ ರೈತರ ಹೋರಾಟ ಸಮಿತಿ ಸಂಚಾಲಕ ಎಂ.ಎಲ್.ಬಸವರಾಜ್ ಮಾತನಾಡಿ, ‘1980ರಲ್ಲಿ ಕೇಂದ್ರ ಸರ್ಕಾರ ಅರಣ್ಯ ಕಾಯ್ದೆ ಜಾರಿಗೆ ತರುವುದಕ್ಕಿಂತ ಮುಂಚೆಯಿಂದಲೂ ಮಸಗಲಿ ಅರಣ್ಯ ವ್ಯಾಪ್ತಿಯಲ್ಲಿ ರೈತರು ಕೃಷಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಸಣ್ಣ ಹಿಡುವಳಿದಾರರನ್ನು ಉಳಿಸುವಂತೆ ಅರಣ್ಯ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಮಾತನಾಡಿ, ‘ಐದು ಎಕರೆ ಒತ್ತುವರಿ ಮಾಡಿ ಜೀವನ ಸಾಗಿಸುತ್ತಿರುವ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸದಂತೆ ಹೈಕೋರ್ಟ್‌ ಆದೇಶಿಸಿದೆ. ಸಣ್ಣಹಿಡುವಳಿದಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದರು. ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ರೈತ ಸಂಘದ ಮುಖಂಡ ಪುಟ್ಟೇಗೌಡ, ಜೆಡಿಎಸ್ ಮುಖಂಡರಾದ ಮಂಜಪ್ಪ, ಜಿ.ಎಸ್.ಚಂದ್ರಪ್ಪ, ಬೆರಣಗೋಡು ಮಹೇಶ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.