ADVERTISEMENT

ವ್ಯಾಘ್ರನ ದಾಳಿಗೆ ಗೋವು ಬಲಿ; ಕರು ತಬ್ಬಲಿ

ಹೊನ್ನಮ್ಮನ ಹಳ್ಳದ ಬಳಿ ಎರಡು ಹುಲಿ ದರ್ಶನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 5:29 IST
Last Updated 20 ಸೆಪ್ಟೆಂಬರ್ 2014, 5:29 IST

ಚಿಕ್ಕಮಗಳೂರು: ಬಾಬಾ ಬುಡನ್‌ ಗಿರಿಗೆ ಹೋಗುವ ಮಾರ್ಗದ ಹೊನ್ನ ಮ್ಮನ ಹಳ್ಳದ ಬಳಿ ಎರಡು ಹುಲಿಗಳು ಶುಕ್ರವಾರ ಕಾಣಿಸಿ ಕೊಂಡಿದ್ದು, ಮಧ್ಯಾಹ್ನ ಹುಲಿ ದಾಳಿಗೆ ಹಾಲು ಕೊಡುವ ಹಸುವೊಂದು ಬಲಿ ಯಾಗಿದೆ. ತಾಯಿ ಕಳೆದುಕೊಂಡ ಎಳೆ ಕರು ತಬ್ಬಲಿಯಾಗಿದೆ.

ಹೊನ್ನಮ್ಮನ ಹಳ್ಳಕ್ಕೆ ಕೇವಲ ನೂರು ಮೀಟರ್‌ ದೂರದಲ್ಲಿ ಝರಿ ಹೋಂಸ್ಟೇ ಪಕ್ಕದ ರಸ್ತೆ ಬದಿ ಹಸುವನ್ನು ದೈತ್ಯ ಹುಲಿ ಅಟ್ಟಿಸಿಕೊಂಡು ಬಂದು ಕೊಂದುಹಾಕಿ ಹೋಗಿದೆ. ಓಡುತ್ತಿದ್ದ ಹಸುವನ್ನು ರಸ್ತೆ ಬದಿ ಗುಡ್ಡದಿಂದ ಹಾರಿ ಬೇಟೆಯಾಡಿ, ತೋಟಕ್ಕೆ ಎಳೆದೊಯ್ದಿದ್ದನ್ನು ಪ್ರವಾಸಿಗರ ವಾಹನದ ಚಾಲಕನೊಬ್ಬ ನೋಡಿದ್ದನ್ನು ಸ್ಥಳೀಯರು ಖಚಿತಪಡಿಸಿದ್ದಾರೆ. ವರ್ಷದ ಹಿಂದೆ ಹುಲಿ ದಾಳಿಗೆ ತುತ್ತಾಗಿ ಅದೃಷ್ಟವಶಾತ್‌ ಬದುಕುಳಿದಿರುವ ಅಬ್ದುಲ್ ಮುಜೀಬ್‌ ಎಂಬುವವರಿಗೆ ಸೇರಿದ ಹಾಲು ಕೊಡುವ ಹಸು ಹುಲಿಗೆ ಬಲಿಯಾಗಿದೆ.

ಮಾಜಿ ಸಚಿವ ಸಿ.ಆರ್‌.ಸಗೀರ್‌ ಅಹ ಮದ್‌ ಅವರ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ. ಹಸುವನ್ನು ರಸ್ತೆಯಿಂದ ತೋಟದವರೆಗೂ ಹುಲಿ ಎಳೆದುಕೊಂಡು ಹೋಗಿರುವುದನ್ನು ಸ್ಥಳೀಯರು ಮತ್ತು ಪ್ರವಾಸಿಗರು ಹತ್ತಿರದಿಂದ ನೋಡಿದ್ದಾರೆ. ಸುಮಾರು ಅರ್ಧ ತಾಸು ಹುಲಿ ಅತ್ತಿತ್ತ ಕದಲದೇ ಹಸುವಿನ ಕಳೇಬರದ ಬಳಿಯೇ ಇತ್ತು. ಗಿರಿಗೆ ಹೋಗುವ ಪ್ರವಾಸಿಗರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಹುಲಿ ಸ್ಥಳದಿಂದ ಕಾಲ್ತೆಗೆದಿದೆ. ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಮೂಡಿವೆ.

ಇತ್ತ ಸಗೀರ್‌ ಅಹಮದ್‌ ಅವರ ತೋಟದಲ್ಲಿ ಹುಲಿ ಇದೆ ಎಂದು ರಸ್ತೆ ಬದಿ ಅಂಗಡಿ ಇಟ್ಟುಕೊಂಡಿರುವ ವಾಜಿದ್‌ ಎಂಬಾತ, ಹೊನ್ನಮ್ಮನ ಹಳ್ಳದ ಬಳಿ ಚುರುಮುರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ರವಾನಿಸಿದರೆ, ಅದೇ ಸಮಯಕ್ಕೆ ಹೊನ್ನಮ್ಮನ ಹಳ್ಳದತ್ತಿರ ನೀರು ಧುಮ್ಮಿಕ್ಕುವ ಜಲಪಾತದ ತುದಿಯ ಗುಡ್ಡದಲ್ಲಿ ಭಾರಿ ಗಾತ್ರದ ಹುಲಿ ಕುಳಿತಿರುವುದನ್ನು ಪ್ರವಾಸಿಗರು ಮತ್ತು ವ್ಯಾಪಾರಿಗಳು ಕುತೂಹಲದಿಂದ ನೋಡುತ್ತಿದ್ದರು. ಹತ್ತಾರು ಮಂದಿ ಪ್ರವಾಸಿಗರು ತಮ್ಮ ಕ್ಯಾಮೆರಾಗಳಿಂದ ಚಿತ್ರಗಳನ್ನು ಪಟಪಟನೇ ಸೆರೆ ಹಿಡಿಯುತ್ತಿದ್ದರೂ ಹುಲಿ ಮಾತ್ರ ಇಪ್ಪತ್ತುಮೂವತ್ತು ನಿಮಿಷ ಅತ್ತಿತ್ತ ಮಿಸುಕಾಡಲಿಲ್ಲ ಎಂದು ಚುರುಮುರಿ ಅಂಗಡಿ ಮಾಲೀಕ ಸ್ಥಳಕ್ಕೆ ಹೋದವರಿಗೆ ವರ್ಣಿಸುತ್ತಿದ್ದ. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಹುಲಿ ಕಾಣಿಸಿರುವ ಬಗ್ಗೆ ಮತ್ತು ಹಸು ಹುಲಿಗೆ ಬಲಿಯಾಗಿರುವ ಬಗ್ಗೆ ತುಟಿ ಬಿಚ್ಚಲಿಲ್ಲ.

ಮಧ್ಯಾಹ್ನ ಸುಮಾರು 1.30ರಿಂದ 2 ಗಂಟೆ ನಡುವೆ ಕೇವಲ ಕೂಗಳತೆ ದೂರದಲ್ಲಿ ಎರಡು ಹುಲಿಗಳು ಪ್ರವಾಸಿಗರ ದಟ್ಟಣೆ ಇರುವ ಜಾಗ ದಲ್ಲಿ ಕಾಣಿಸಿಕೊಂಡಿರುವುದು ಪ್ರವಾಸಿ ಗರ ಕುತೂಹಲ ಕೆರಳಿಸಿದೆ. ಜತೆಗೆ ಸ್ಥಳೀಯರಿಗೆ ಆತಂಕವನ್ನೂ ಮೂಡಿಸಿದೆ.

ಹಸು ಕಳೆದುಕೊಂಡಿರುವ ಅಬ್ದುಲ್‌ ಮುಜೀಬ್‌ ‘ಈ ವರ್ಷದಲ್ಲೇ 15 ಹಸುಗಳು ಹುಲಿ ಬಾಯಿಗೆ ಆಹಾರ ವಾಗಿವೆ. ಒಟ್ಟು 236 ದನಗಳನ್ನು ಸಾಕಿದ್ದೆ. ವರ್ಷ ವರ್ಷವೂ ದನಗಳನ್ನು ಕಳೆದುಕೊಂಡು, ಈಗ ಕೊಟ್ಟಿಗೆಯಲ್ಲಿ 35 ದನಗಳು ಉಳಿದಿದ್ದವು. ಬೆಳಿಗ್ಗೆ ದನಗಳನ್ನು ಗುಡ್ಡಕ್ಕೆ ಮೇಯಲು ಬಿಟ್ಟು, ಹುಲಿಯಿಂದ ಪೆಟ್ಟುಬಿದ್ದು ನೋವಿರುವ ಭಾಗಗಳಿಗೆ ಔಷಧೋಪ ಚಾರ ಮಾಡಿಸಿಕೊಳ್ಳಲು ಜಾಜೂರಿಗೆ ಹೋಗಿದ್ದೆ. ಬರುವಷ್ಟರಲ್ಲಿ ಹಾಲು ಕೊಡುವ ಹಸು ಹೆಣವಾಗಿ ಬಿದ್ದಿದೆ’ ಎಂದು ’ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಇಷ್ಟೊಂದು ಹಸುಗಳನ್ನು ಹುಲಿ ಕೊಂದು ತಿನ್ನುತ್ತಿದ್ದರೂ ಅರಣ್ಯ ಇಲಾಖೆಯಿಂದ ಬಿಡಿಗಾಸು ಪರಿಹಾರ ಇಲ್ಲ. ಕಳೆದ ವರ್ಷ ಬಕ್ರೀದ್‌ ಹಬ್ಬ ವೇಳೆಗೆ ಸ್ವತಃ ನನ್ನ ಮೇಲೆಯೇ ಹುಲಿ ದಾಳಿ ಮಾಡಿತ್ತು. ಜೀವನ್ಮರಣದ ಹೋರಾಟ ನಡೆಸಿ ಅಲ್ಲಾನ ಕೃಪೆಯಿಂದ ಬದುಕಿದೆ. ಹುಲಿಯಿಂದ ಪೆಟ್ಟು ತಿಂದು ವರ್ಷ ಕಳೆದಿಲ್ಲ. ನೋವು ಹಾಗೆಯೇ ಉಳಿದಿದೆ. ಕೊಟ್ಟಿಗೆಯಿಂದ ಮೇಯಲು ಹೋದ ಹಸುಗಳು ಒಂದೊಂದೇ ಹುಲಿ ಬಾಯಿಗೆ ಆಹಾರ ವಾಗುತ್ತಿವೆ. ಮೇಯಲು ಬಿಡದೆ ಕೊಟ್ಟಿಗೆಯಲ್ಲಿ ಕಟ್ಟಿಕೊಂಡು ಮೇವು ಹಾಕಲು ಆಗುವುದಿಲ್ಲ. ಮೇಯಲು ಬಿಡದೆ ಅನ್ಯ ಮಾರ್ಗವಿಲ್ಲ. ದನಗಳೇ ನನಗೆ ಜೀವನಾಧಾರ’ ಎಂದು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.