ADVERTISEMENT

‘ಸಂರಕ್ಷಣೆ ನೆಪದಲ್ಲಿ ಭೂ ಕಬಳಿಕೆಗೆ ಸಂಚು’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 6:09 IST
Last Updated 15 ಏಪ್ರಿಲ್ 2017, 6:09 IST

ಕೊಪ್ಪ: ‘ಪರಿಸರ ಸಂರಕ್ಷಣೆ ನೆಪದಲ್ಲಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಮಟ್ಟದ ಸಂಚು ನಡೆಯುತ್ತಿದ್ದು, ಇದರ ಭಾಗವಾಗಿ ಕಸ್ತೂರಿರಂಗನ್ ವರದಿಯಂತಹ ಜನ ವಿರೋಧಿ ಯೋಜನೆ ರೂಪಿಸಲಾಗು ತ್ತಿದೆ’ ಎಂದು ಪರಿಸರ ಹೋರಾಟ ಗಾರ ಕಲ್ಕುಳಿ ವಿಠಲ ಹೆಗ್ಡೆ ಆರೋಪಿಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಭಂಡಿಗಡಿ ಮತ್ತು ಹೊಸೂರು ಗ್ರಾಮಸ್ಥರು ಕಸ್ತೂರಿ ರಂಗನ್ ವರದಿ  ಅನುಷ್ಠಾನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ನಡುವಿನ ಒಂದಷ್ಟು ಇಂಗ್ಲಿಷ್ ಕಲಿತ, ಅಂತರರಾಷ್ಟ್ರೀಯ ಮಟ್ಟದ ನಕಲಿ ಪರಿಸರ ವಾದಿಗಳು ಹುಲಿಯೋಜನೆ, ರಾಷ್ಟ್ರೀಯ ಉದ್ಯಾನ ಇನ್ನಿತರ ಯೋಜನೆಗಳ ಹೆಸರಲ್ಲಿ ನಮ್ಮ ಭೂಮಿಯನ್ನು ವಿದೇಶಿಗರಿಗೆ ವಶಪಡಿಸಿ ಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಪ್ರತಿ ಫಲವಾಗಿ ಅವರಿಗೆ ಡಾಲರ್ ಲೆಕ್ಕದಲ್ಲಿ ಹಣ ಬರುತ್ತದೆ’ ಎಂದು ದೂರಿದರು.

‘ಕೃಷಿ ಜಮೀನಿಗಿಂತಲೂ ಪ್ರೀತಿ ಯಿಂದ ಹಾಡ್ಯಗಳನ್ನು ಬೆಳೆಸಿದ ನಮಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಬದುಕುವ ಅಂತರಿಕ್ಷ ವಿಜ್ಞಾನಿ ಕಸ್ತೂರಿ ರಂಗನ್ ಅವರು ಪರಿಸರ ಸಂರಕ್ಷಣೆಯ ಪಾಠ ಹೇಳಲು ಬಂದಿರುವುದು ದುರಂತ. ನಾವು ಸಾವಯವ ಕೃಷಿ ನಡೆಸಬೇಕೆಂದೂ, ಒಲೆ ಉರಿಸಲು ಗೋಬರ್ ಗ್ಯಾಸ್ ಬಳಸಬೇಕೆಂದೂ, ಏಕ ಜಾತಿ ಸಸ್ಯ ಬೆಳೆಸಬಾರದೆಂದೂ, ಸೈಕಲ್‌ನಲ್ಲೇ ಓಡಾಡಬೇಕೆಂದೂ ಸಲಹೆ ನೀಡುವ ಇಂತಹ ಅಧಿಕಾರಿಗಳು, ತಾವು ಯಾವುದರಲ್ಲಿ ಓಡಾಡುತ್ತಾರೆ? ಹೇಗೆ ಬದುಕುತ್ತಾರೆ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ನಮ್ಮ ಬದುಕಿನ ಹಕ್ಕನ್ನು ಕಿತ್ತುಕೊಳ್ಳುವ ಇಂತಹ ಜನವಿರೋಧಿ ಯೋಜನೆ ವಿರುದ್ಧ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಪತ್ರಾಂದೋ ಲನ ನಡೆಸುವ ಜತೆಗೆ ಪಕ್ಷಾತೀತವಾಗಿ ಪ್ರಬಲ ಹೋರಾಟ ರೂಪಿಸಬೇಕಿದೆ’   ಎಂದರು.

ADVERTISEMENT

ಭಂಡಿಗಡಿಯ ವೈದ್ಯ ಬಿ.ಆರ್. ಅಂಬರೀಶ್ ಪ್ರಾಸ್ತಾವಿಕವಾಗಿ ಮಾತ ನಾಡಿ, ‘ಕಸ್ತೂರಿ ರಂಗನ್ ವರದಿ ಜಾರಿ ಯಾದರೆ ಇಡೀ ಭಂಡಿಗಡಿ ಪಂಚಾಯಿ ತಿಯ 6,600 ಎಕರೆ ಪ್ರದೇಶದ 4,865 ಮಂದಿ ನಿರಾಶ್ರಿತರಾಗಲಿದ್ದಾರೆ. ಗ್ರಾಮ ದಲ್ಲಿ ಶೇ 58 ಕಾಡು ಮತ್ತು ಶೇ 26 ಜನ ವಸತಿ ಪ್ರದೇಶವಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ. ಶೇ 42 ಕಾಡು ಮತ್ತು ಶೇ 74 ಜನವಸತಿ ಇರುವುದು ವಾಸ್ತವ’ ಎಂದರು.

ಹೋರಾಟ ಸಮಿತಿ ಸಂಚಾಲಕ ಎಚ್.ಕೆ. ಸುರೇಶ್ ಹೊಸೂರು ಮಾತ ನಾಡಿ, ‘ಕಸ್ತೂರಿ ರಂಗನ್ ವರದಿಯನ್ನು ಭಂಡಿಗಡಿ ಮತ್ತು ಹೊಸೂರು ಗ್ರಾಮ ದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಅದಕ್ಕಾಗಿ ಎರಡೂ ಗ್ರಾಮದ ಜನತೆ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದು, ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ’ ಎಂದರು.

ಬೆಳಿಗ್ಗೆ ಭಂಡಿಗಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಡಿ. ಜ್ಯೋತಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಸ್ವಯಂಪ್ರೇರಿತ ಪೇಟೆ ಬಂದ್ ನಡೆಸಲಾಗಿತ್ತು. ಬಳಿಕ ಸಹಕಾರ ಸಾರಿಗೆಯ 4 ಬಸ್‌ಗಳಲ್ಲಿ ಮತ್ತು ನೂರಾರು ವಾಹನಗಳಲ್ಲಿ ಸಾವಿರಾರು ಗ್ರಾಮಸ್ಥರು ಕೊಪ್ಪ ಪಟ್ಟಣಕ್ಕೆ ಬಂದು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಬಹಿರಂಗ ಸಭೆ ನಡೆಸಿ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರಾದ ಎಸ್.ಎನ್. ರಾಮಸ್ವಾಮಿ, ಹೊಸೂರು ದಿನೇಶ್, ಎಸ್.ಎಸ್. ರಾಮಪ್ಪ, ಎಂ.ಕೆ. ಕಿರಣ್, ಚಿತ್ತೆಹಡ್ಲು ಸುಧಾಕರ್, ಎಂ.ಪಿ. ಸಂತೋಷ್, ಮಂಜುಳಾ ಮಂಜು ನಾಥ್, ನಬೀಸ ಬಾನು, ಕಾಂಗ್ರೆಸ್ ಮುಖಂಡರಾದ ಟಿ.ಡಿ. ರಾಜೇಗೌಡ, ಓಣಿತೋಟ ರತ್ನಾಕರ್, ಸುಬ್ರಹ್ಮಣ್ಯ ಶೆಟ್ಟಿ, ಕೆ.ಟಿ. ಮಿತ್ರ, ನಾರ್ವೆ ಅಶೋಕ್, ಶ್ರೀಧರ ಅಂಬಳಿಕೆ, ಲಿಂಗಪ್ಪ ಸಕ್ರೆಬೈಲ್, ಮೂರ್ತಿ ಕೊಡಿಗೆ, ಮಹೇಶ್, ದಿನೇಶ್, ಅರೇ ಕಲ್ ಸತೀಶ್, ಲೋಹಿತ್, ಚಂದ್ರಪ್ಪ, ಗಿರಿಯಪ್ಪ, ಗಿರಿಜ ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಎಚ್.ಜಿ. ವೆಂಕಟೇಶ್, ಬಿ.ಎಚ್.ದಿವಾಕರ್, ನಾಗೇಂದ್ರ ಭಂಡಿಗಡಿ, ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್. ಧರ್ಮಪ್ಪ, ಕಸಾಪ ಅಧ್ಯಕ್ಷ ಎಚ್.ಎಂ.ರವಿಕಾಂತ್, ಮುಖಂಡರಾದ ಎಚ್.ಕೆ. ಪ್ರಶಾಂತ್, ರಾಜೀವ್, ಮಹೇಂದ್ರ, ಲೋಹಿತಾಶ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.