ADVERTISEMENT

‘₹20 ಕೋಟಿ ನಷ್ಟದಲ್ಲಿ ಸಾರಿಗೆ ನಿಗಮ’

ಕೆಎಸ್‌ಆರ್‌ಟಿಸಿ ವಿಭಾಗ ಮಟ್ಟದ ಅಹವಾಲು ಸ್ವೀಕಾರ--– ಜನಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:52 IST
Last Updated 11 ಮಾರ್ಚ್ 2017, 6:52 IST
‘₹20 ಕೋಟಿ ನಷ್ಟದಲ್ಲಿ ಸಾರಿಗೆ ನಿಗಮ’
‘₹20 ಕೋಟಿ ನಷ್ಟದಲ್ಲಿ ಸಾರಿಗೆ ನಿಗಮ’   
ಚಿಕ್ಕಮಗಳೂರು: ‘ರಾಜ್ಯ ರಸ್ತೆ ಸಾರಿಗೆ ನಿಗಮ ಜನಸಾಮಾನ್ಯರ ಸಂಸ್ಥೆಯಾಗಿ ರೂಪುಗೊಳ್ಳಲು ಸಾರ್ವಜನಿಕರು ಮತ್ತು ಅಧಿಕಾರಿಗಳ ಸಹಭಾಗಿತ್ವ ಅಗತ್ಯವಿದೆ’ ಎಂದು ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.
 
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಎಸ್‌ಆರ್‌ಟಿಸಿ ವಿಭಾಗ ಮಟ್ಟದ ಅಹವಾಲು ಸ್ವೀಕಾರದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
 
ಮೈಸೂರು ಸಂಸ್ಥಾನವಿದ್ದಾಗ 1963 ರಲ್ಲಿ ಸಮೂಹ ಸಾರಿಗೆಯಾಗಿ ಕೆಎಸ್‌ ಆರ್‌ಟಿಸಿ ಹೊರಹೊಮ್ಮಿತು. ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದರೂ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ನಗರದ ಹಳೇ ಜೈಜು ಜಾಗವನ್ನು ಗ್ರಾಮೀಣ ಬಸ್‌ ಸಾರಿಗೆ ನಿಲ್ದಾಣಕ್ಕೆ ಕೆಎಎಸ್‌ಆರ್‌ಟಿಸಿಗೆ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಪ್ರತ್ಯೇಕಿಸಬಹುದು ಎಂದರು.
 
ತರೀಕೆರೆ, ಆಲ್ದೂರು, ಸಿಂಗಟಗೆರೆ, ಅಂತರಗಟ್ಟೆ, ಯಗಟಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಸರ್ಕಾ ರದ ಪರಿಶೀಲನೆಯಲ್ಲಿದೆ ಎಂದರು.
ಕೆಎಸ್‌ಆರ್‌ಟಿಸಿ ವಿಭಾಗದ ಜಿಲ್ಲಾ ಅಧಿಕಾರಿ ಅನಿಲ್‌ಕುಮಾರ್‌ ಮಾತನಾಡಿ, ವಿಭಾಗವು 2016–17ನೇ ಸಾಲಿನಲ್ಲಿ ಜನವರಿವರೆಗೆ ₹19.64 ಕೋಟಿ ನಷ್ಟ ಅನುಭವಿಸಿದೆ. ಡೀಸೆಲ್‌ ದರ ಹೆಚ್ಚಳ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ನಷ್ಟಕ್ಕೆ ಪ್ರಮುಖ ಕಾರಣ ಎಂದರು.
 
2014ರಲ್ಲಿ ನಗರ ಸಾರಿಗೆ ಬಸ್‌ ಸೇವೆ ಆರಂಭಿಸಲಾಗಿದೆ. ಸದ್ಯ 10 ಮಾರ್ಗಗಳಲ್ಲಿ 10 ಬಸ್‌ಗಳು ಕಾರ್ಯಾ ಚರಿಸುತ್ತಿದ್ದು, ಪ್ರತಿ ದಿನ 92 ಸುತ್ತುವಳಿ ಗಳೊಂದಿಗೆ 1,146 ಕಿ.ಮೀ. ಸಂಚಾರ ಮಾಡುತ್ತಿವೆ. ಪ್ರತಿ ದಿನ ಸರಾಸರಿ 3,453 ಸಾರ್ವಜನಿಕರು, 2,069 ವಿದ್ಯಾರ್ಥಿಗಳು ಸೇರಿದಂತೆ 5,522 ಪ್ರಯಾಣಿಕರು ನಗರ ಸಾರಿಗೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದರು.
 
ಜನವರಿವರೆಗೆ 32,023 ವಿದ್ಯಾರ್ಥಿ ಪಾಸು, 32,188 ತಿಂಗಳ ಪಾಸು, 3055 ಅಂಗವಿಕಲರ ಪಾಸು, 199 ಅಂಧರ ಉಚಿತ ಪಾಸು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
 
ಚಿಕ್ಕಮಗಳೂರು ವಿಭಾಗದಲ್ಲಿ 6 ಘಟಕಗಳು, 2 ಸಂಚಾರ ನಿಯಂತ್ರಣ ಕೇಂದ್ರಗಳು, 18 ಬಸ್‌ ನಿಲ್ದಾಣಗಳು, ಸುಸಜ್ಜಿತ ಸಿಬ್ಬಂದಿ ತರಬೇತಿ ಕೇಂದ್ರ ಹಾಗೂ ವಿಭಾಗೀಯ ಕಾರ್ಯಾಗಾರವಿದೆ ಎಂದು ಸಾರಿಗೆ ನಿಗಮದ ಅಧಿಕಾರಿ ದಶರಥ ತಿಳಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಜನಪ್ರತಿನಿಧಿಗಳಿಂದ ಮತ್ತು ಸಂಘ ಸಂಸ್ಥೆಗಳ ಮುಖಂಡರಿಂದ ಅಹವಾಲು ಸ್ವೀಕರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.