ADVERTISEMENT

ಕಲ್ಲಟ್ಟಿಯ ಜಾಲಿ ಗಿಡಗಳ ಪೊದೆಯಲ್ಲಿ ಗಜರಾಜರ ವಿಹಾರ!

ಗಾಣಧಾಳು ಶ್ರೀಕಂಠ
Published 21 ನವೆಂಬರ್ 2017, 7:25 IST
Last Updated 21 ನವೆಂಬರ್ 2017, 7:25 IST
ಕಲ್ಲಟ್ಟಿ ಜಮೀನುಗಳಿಗೆ ನುಗ್ಗಿರುವ ಆನೆಗಳು
ಕಲ್ಲಟ್ಟಿ ಜಮೀನುಗಳಿಗೆ ನುಗ್ಗಿರುವ ಆನೆಗಳು   

ಐಮಂಗಲ(ಹಿರಿಯೂರು ತಾಲ್ಲೂಕು): ಒಂದು ಕ್ಷಣ ಕಾಣಿಸಿಕೊಂಡು, ಮತ್ತೊಂದು ಕ್ಷಣಕ್ಕೆ ನಾಪತ್ತೆಯಾಗುತ್ತವೆ. ‘ಡಮ್’ ಎನ್ನುವ ಪಟಾಕಿ ಶಬ್ದಕ್ಕೆ ಬೆದರಿ ಓಡಿ ಹೋಗುತ್ತಾ, ಇನ್ನೆಲ್ಲೋ ಒಂದೆಡೆ ಧುತ್ತೆಂದು ಕಾಣಿಸಿಕೊಳ್ಳುತ್ತವೆ. ಜನರು ‘ಹೋ..’ ಎನ್ನುತ್ತಾ ಬೊಬ್ಬೆ ಹೊಡೆದರೆ ದಿಕ್ಕಾಪಾಲಾಗಿ ಓಡುತ್ತಾ, ಓಡಿಸುವವರಿಗೇ ಬೆವರಿಳಿಸುತ್ತಿವೆ...!

ಇಲ್ಲಿಗೆ ಸಮೀಪದ ಕಲ್ಲಟ್ಟಿ ಗ್ರಾಮದ ಹೊಲಗಳಿಗೆ ಸೋಮವಾರ ಬೆಳಿಗ್ಗೆ ನುಗ್ಗಿರುವ ಎರಡು ಆನೆಗಳು ಹೀಗೆಲ್ಲ ಉಪಟಳ ನೀಡುತ್ತಾ, ಕಾರ್ಯಾಚರಣೆ ನಡೆಸುತ್ತಿರುವವರನ್ನು ಸುತ್ತು ಹೊಡೆಸುತ್ತಿವೆ. ಭದ್ರಾ ಅಭಯಾರಣ್ಯದ ಕಡೆಯಿಂದ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಅರಣ್ಯವನ್ನು ದಾಟಿ ಭಾನುವಾರ ರಾತ್ರಿಯೇ ಕಲ್ಲಟ್ಟಿ ಸುತ್ತಲಿನ ಹೊಲಗಳಿಗೆ ಈ ಆನೆಗಳು ನುಗ್ಗಿವೆ.

ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಲ್ಲಟ್ಟಿ ರೈತರು ಜಾಲಿ ಗಿಡಗಳ ಪೊದೆಯಲ್ಲಿ ಅಡ್ಡಾಡುತ್ತಿದ್ದನ್ನು ಈ ಆನೆಗಳನ್ನು ನೋಡಿ ಗಾಬರಿಗೊಂಡು ಊರಿನವರಿಗೆ ವಿಷಯ ತಿಳಿಸಿದರು. ತಕ್ಷಣ ಗುಂಪು ಗುಂಪಾಗಿ ಹೊಲಗಳ ಕಡೆ ಬಂದ ಗ್ರಾಮಸ್ಥರು ಕೂಗಾಡುತ್ತಾ, ಕಲ್ಲು ತೂರುತ್ತಾ ಆನೆಗಳನ್ನು ಓಡಿಸಲು ಮುಂದಾದರು. ಗ್ರಾಮಸ್ಥರ ಕೂಗಾಟಕ್ಕೆ ಕಂಗಾಲಾದ ಗಜಗಳು ದಿಕ್ಕಾಪಾಲಾಗಿ ಓಡಿ ಹೋದವು. ‘ಬೆಳಿಗ್ಗೆ ಹೊಲದ ಕಡೆ ಆನೆ ಬಂದಿವೆ ಎಂದರು.

ADVERTISEMENT

‘ಒಂದಷ್ಟು ಮಂದಿ ಗುಂಪಾಗಿ ಓಡಿಸೋಣ ಎಂದು ಬಂದವು. ಆದರೆ, ಇದ್ದಕ್ಕಿದ್ದಂತೆ ಜಾಲಿಗಿಡಗಳ ಸಂದಿಯಲ್ಲಿ ನಾಪತ್ತೆಯಾದವು’ ಎಂದು ಗ್ರಾಮದ ಪಿ.ಎಸ್. ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸೊಂಡಿಲನಿಂದ ತಿವಿದ ಆನೆ: ಬೆಳಿಗ್ಗೆ ಆನೆ ಓಡಿಸಲು ಬಂದ ಕಲ್ಲಹಟ್ಟಿಯ ಷಫಿವುಲ್ಲಾ ಅವರನ್ನು ಆನೆ ಸೊಂಡಿಲಿನಿಂದ ತಿವಿದಿದೆ. ಅದರ ರಭಸಕ್ಕೆ ಷಫಿವುಲ್ಲಾ ಮುಗ್ಗರಿಸಿಬಿದಿದ್ದಾರೆ. ನಂತರ ಎದ್ದು, ಓಡಿ ತಪ್ಪಿಸಿಕೊಂಡಿದ್ದಾರೆ. ‘ಆನೆ ನೋಡೋಕೆ ಬಂದೆ ಸಾರ್. ಪಕ್ಕದಲ್ಲಿರೋದು ಗೊತ್ತಾಗಲಿಲ್ಲ. ನೋಡ ನೋಡುತ್ತಿದ್ದಂತೆ ಸೊಂಡಿಲಿಂದ ತಿವಿಯಿತು, ನೋಡಿ.. ಅಷ್ಟು ದೂರ ಹೋಗಿ ಬಿದ್ದೆ. ಮೊಬೈಲು, ಮೆಟ್ಟು ಎಲ್ಲ ಅಲ್ಲೇ ಬಿದ್ವು. ಎದ್ನೋ, ಬಿದ್ನೋ ಅಂತ ಓಡಿ ಬಂದೆ. ಯಾರೋ ಮೊಬೈಲ್ ಕೊಟ್ಟರು. ಮೆಟ್ಟು ಅಲ್ಲೇ ಬಿದ್ದೈತೆ’ ಎನ್ನುತ್ತಾ ನಡೆದ ಘಟನೆಯನ್ನು ಷಫೀವುಲ್ಲಾ ‘ಪ್ರಜಾವಾಣಿ’ಗೆ ವಿವರಿಸಿದರು.

‘ಷಫೀವುಲ್ಲಾ ಬೀಳ್ತಿದ್ದರೆ, ನಾವಿಂದಿಷ್ಟು ಜನ ಆನೆ ಕೈಗೆ ಸಿಕ್ಕಿಬಿಡ್ತಿದ್ದವೋ ಏನೋ’ ಎಂದು ಪಾತಲಿಂಗಪ್ಪ ನೆನಪಿಸಿಕೊಂಡರು. ಆನೆ ನುಗ್ಗಿದ್ದು, ಓಡಿಸಲು ಪಜೀತಿ ಪಟ್ಟಿದ್ದನ್ನು ತಿಪ್ಪೇಸ್ವಾಮಿ, ಎಂ.ಶಿವಣ್ಣ, ಡಿ.ಮೂರ್ತಿ ಕೂಡ ವಿವರಿಸಿದರು.

ಪಟಾಕಿ ಸದ್ದಿಗೂ ಅಂಜುತ್ತಿಲ್ಲ: ಆನೆಗಳನ್ನು ಓಡಿಸಲು ಹೊಸದುರ್ಗ ಮತ್ತು ಹಿರಿಯೂರು ತಾಲ್ಲೂಕಿನ ಸಹಾಯಕ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗಾರ್ಡ್‌, ಫಾರೆಸ್ಟರ್‌, ಸಿಬ್ಬಂದಿ ಆನೆಗಳಿರುವ ಸ್ಥಳಗಳಲ್ಲಿ ಪಟಾಕಿ (ಆಟಮ್‌ ಬಾಂಬ್‌)ಗಳನ್ನು ಸಿಡಿಸಿ, ಅವುಗಳನ್ನು ಬೆದರಿಸಿ, ಓಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಪಟಾಕಿ ಶಬ್ದಕ್ಕೆ ಬೆದರಿದಂತೆ ಮಾಡುವ ಆನೆಗಳು ಮನಸೋ ಇಚ್ಛೆ ಓಡುತ್ತಾ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸುಸ್ತು ಮಾಡಿಸುತ್ತಿವೆ.

‘ಬಿಸಿಲು ಇರುವುದರಿಂದ, ಆನೆಗಳನ್ನು ಓಡಿಸುವುದು ಕಷ್ಟ. ಸಂಜೆ 4 ಗಂಟೆಯಾದರೆ, ಬಿಸಿಲು ಕಡಿಮೆಯಾಗುತ್ತದೆ. ಸಂಜೆ ಮೇಲೆ ಕಾರ್ಯಾಚರಣೆ ನಡೆಸುವುದು ಸುಲಭ. ಹಾಗಾಗಿ ಕಾರ್ಯಾಚರಣೆಯನ್ನು ಮುಂದುವರಿಸುತ್ತಾ, ಸಂಜೆ ಮೇಲೆ ಚುರುಕುಗೊಳಿಸುತ್ತೇವೆ’ ಎಂದು ಹಿರಿಯೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ್ ತಿಳಿಸಿದರು. ಆನೆಗಳು ಸಂಜೆ ವೇಳೆಗೆ ಐಮಂಗಲ ಸಮೀಪದ ಕೊಳಹಾಳ್ ದಾಟಿ, ಕೆನ್ನೆಡಲು ಗ್ರಾಮದತ್ತ ಹೊರಟಿವೆ.

ಗಾಯಗೊಂಡ ಯುವಕ: ಆನೆ ಕಾರ್ಯಾಚರಣೆ ನೋಡಲು ಸುದೀಪ್ (17) ಎಂಬ ಯುವಕ ಮರ ಏರಿದ್ದ. ಅದೇ ಮರಕ್ಕೆ ಆನೆ ಗುದ್ದಿದ ಪರಿಣಾಮ, ಆತ ಕೆಳಗೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಸ್ಪತ್ರೆಗೆ ದಾಖಲಿಸಾಗಿದೆ.

ಭದ್ರಾ ಅರಣ್ಯದಿಂದ ಬಂದಿವೆ... ‘ಭದ್ರಾ ಅಭಯಾರಣ್ಯದ ಕಡೆಯಿಂದ ಆನೆಗಳು ಬಂದಿವೆ ಎಂದು ಭಾನುವಾರ ರಾತ್ರಿ ಮಾಹಿತಿ ಸಿಕ್ಕಿತು. ಬೆಳಿಗ್ಗೆ ಗ್ರಾಮಸ್ಥರೂ ಕರೆ ಮಾಡಿ ತಿಳಿಸಿದರು. ತಕ್ಷಣ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಆರಂಭಿಸಿದೆವು’ ಎಂದು ಹಿರಿಯೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ್ ತಿಳಿಸಿದರು. ಆನೆಗಳನ್ನು ಪತ್ತೆ ಮಾಡಲು ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದೇವೆ. ಪಟಾಕಿ ಸಿಡಿಸಿ ಅವುಗಳನ್ನು ಓಡಿಸುವ ಪ್ರಯತ್ನದಲ್ಲಿದ್ದೇವೆ’ ಎಂದರು.

* * 

ಇದೇ ಮೊದಲ ಬಾರಿಗೆ ನಮ್ಮೂರಿಗೆ ಆನೆಗಳು ಬಂದಿರುವುದು. ಹಾಗಾಗಿ ಗಾಬರಿಗೊಂಡು ಊರಿನವರೆಲ್ಲ ಸೇರಿ ಓಡಿಸಲು ಮುಂದಾಗವ್ರೆ.
ಪಿ.ಎಸ್. ಶಿವಣ್ಣ, ಗ್ರಾಮಸ್ಥ

* * 

ಎಲ್ಲರೂ ಬಾಯ್ಮಾಡ್ಕೊಂಡು ಓಡ್ಸಾಕೆ ಅಂತ ಬಂದ್ರು. ಕಲ್ಲು ಹೊಡೆದರು. ನನ್ನ ಮ್ಯಾಲ್ ನುಗ್ಗಿ ಬಂತು. ಸೊಂಡ್ಲಿಂದ ಎತ್ಕೊಂಡು ದೂರ ಒಗೀತು.
ಷಫೀವುಲ್ಲ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.