ADVERTISEMENT

ಗೋಡೆ ಏರುವವರಿಗೆ ‘ಆರೋಹಣ’

ಗಾಣಧಾಳು ಶ್ರೀಕಂಠ
Published 17 ಮಾರ್ಚ್ 2017, 4:36 IST
Last Updated 17 ಮಾರ್ಚ್ 2017, 4:36 IST
ಆರೋಹಣ (ಸಂಗ್ರಹ ಚಿತ್ರ )
ಆರೋಹಣ (ಸಂಗ್ರಹ ಚಿತ್ರ )   

ಚಿತ್ರದುರ್ಗ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ  ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಜತೆಗೆ ಹೊಸದುರ್ಗದಲ್ಲಿ ವಿದ್ಯುತ್ ಚಾಲಿತ ಕೈಮಗ್ಗಗಳ ಸಂಕೀರ್ಣ, 50 ಹಾಸಿಗೆಗೆಳ ಆಯುಷ್ ಆಸ್ಪತ್ರೆ, ರಕ್ತವಿದಳನ ಘಟಕದ ಜತೆಗೆ, ‘ಆರೋಹಣ’ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ಈ ನಾಲ್ಕು ಕೊಡುಗೆಗಳಲ್ಲಿ ಆರೋಹಣ ಅಕಾಡೆಮಿ ಒಂದು ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ ಲಭ್ಯವಾಗಿದೆ. ಈ ಅಕಾಡೆಮಿಯನ್ನು ಚಿತ್ರದುರ್ಗದಲ್ಲೇ ಸ್ಥಾಪಿಸಲು ಕಾರಣ ವೇನು? ಎಂಬ ಪ್ರಶ್ನೆಗೆ ಒಂದಷ್ಟು ವಿಶೇಷ ಅಂಶಗಳು ಯವಸಬಲೀಕರಣ ಇಲಾಖೆಯ ಮೂಲಗಳಿಂದ ಲಭ್ಯವಾಗಿವೆ.

ಆರೋಹಣ ಅಥವಾ ವಾಲ್ ಕ್ಲೈಂಬಿಂಗ್ ಎಂಬ ಸಾಹಸ ಕ್ರೀಡೆ ಈಗ ಕೇವಲ  ಸಾಹಸ ಹವ್ಯಾಸ ಆಟವಾಗಿಲ್ಲ. ಬದಲಿಗೆ ಅದನ್ನು ಏಷ್ಯನ್ ಗೇಮ್ಸ್‌ ಮತ್ತು ಒಲಿಂಪಿಕ್ಸ್‌ಗಳಿಗೂ ಸೇರಿಸಲಾಗಿದೆ. ಹಾಗಾಗಿ ಈ ಸಾಹಸ ಕ್ರೀಡೆ ಈಗ ಸ್ಪರ್ಧಾತ್ಮಕ ಕ್ರೀಡೆಯಾಗಿ ಮಾರ್ಪಾಡಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಆರೋಹಣ ಪರಿಣತ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಲುವಾಗಿ ಈ ಆರೋಹಣ ಅಕಾಡೆಮಿಯನ್ನು ಸ್ಥಾಪಿಸಲಾಗುತ್ತಿದೆ.

ADVERTISEMENT

ಇದು ಚಿತ್ರದುರ್ಗದಲ್ಲೇ ಏಕೆ ?: ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ರಾಕ್ ಕ್ಲೈಬಿಂಗ್ ಅಥವಾ ವಾಲ್ ಕ್ಲೈಂಬಿಗ್ ಅನುಭವಿಗಳ ಯುವಕರು ಇದ್ದಾರೆ. ಜತೆಗೆ, ವಾಲ್‌ಕ್ಲೈಂಬಿಂಗಾಗಿ ಸಾಮಾನ್ಯವಾಗಿ ಕೃತಕವಾದ ಗೋಡೆಗಳನ್ನು ನಿರ್ಮಿಸಬೇಕು. ಆದರೆ, ಚಿತ್ರದುರ್ಗದಲ್ಲಿ ಇಂಥ ಸಾಹಸ ಕ್ರೀಡೆಗೆ ಬೇಕಾದ ಸ್ವಾಭಾವಿಕವಾದ ಬಂಡೆಗಳು, ಬೆಟ್ಟಗಳು ಇವೆ.  ‘ಈ ಸ್ಪರ್ಧಾತ್ಮಕ ಕ್ರೀಡೆಗೆ ಚಿತ್ರದುರ್ಗದಲ್ಲಿ ಪೂರಕ ವಾತಾ ವರಣವಿರುವ ಕಾರಣ ಆರೋಹಣ ಅಕಾಡೆಮಿಗಾಗಿ ಚಿತ್ರದುರ್ಗವನ್ನು ಆಯ್ಕೆ ಮಾಡಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರವಾಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಹಿನ್ನೀರಿನ ಪ್ರದೇಶದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯವರು ಜಲಸಾಹಸ ಕ್ರೀಡಾ ತರಬೇತಿ ಕೇಂದ್ರ  ಆರಂಭಿಸಿದ್ದು, ಪ್ರತಿ ವರ್ಷ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ರ್‍್ಯಾಪ್ಟಿಂಗ್, ಬೋಟಿಂಗ್, ಜೆಟ್ ಸ್ಕೀ ಸೇರಿದಂತೆ ಹಲವು ಜಲಸಾಹಸ ಕ್ರೀಡೆಗಳ ತರಬೇತಿ ಅಲ್ಲಿ ಲಭ್ಯವಿದೆ. ಇನ್ನು ಆರೋಹಣ ಅಕಾಡೆಮಿ ಸೇರಿಕೊಳ್ಳುತ್ತಿರುವುದು ಕ್ರೀಡಾಪಟುಗಳ ಸಂತಸ ಇಮ್ಮಡಿಗೊಳಿಸಿದೆ.50

ಹಾಸಿಗೆ ಆಯುಷ್ ಆಸ್ಪತ್ರೆ : ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತಿರುವ  ಆಯುಷ್ ಘಟಕದಲ್ಲಿ ಸದ್ಯ 10 ಹಾಸಿಗೆಗಳ ಕೊಠಡಿಗಳಿವೆ. ಈ ಕೇಂದ್ರಕ್ಕೆ ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಪಂಚಕರ್ಮ, ಫಿಸಿಯೋಥೆರಪಿ ಸೇರಿದಂತೆ ಹಲವು ಆಯುರ್ವೇದ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ.

ಇದನ್ನು ಮನಗಂಡ ಆಯುಷ್ ಇಲಾಖೆ  ಜಿಲ್ಲಾ ಕೇಂದ್ರಕ್ಕೆ ಪ್ರತ್ಯೇಕ ಆಯುಷ್ ಆಸ್ಪತ್ರೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‍ ನಲ್ಲಿ 50 ಹಾಸಿಗೆಗಳ  ಆಸ್ಪತ್ರೆ ಆರಂಭಕ್ಕೆ ಹಸಿರು ನಿಶಾನೆ ತೋರಿದೆ.

‘ಸರ್ಕಾರಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಯುರ್ವೇದ ಆಸ್ಪತ್ರೆಗೆ ಜಾಗ ಕೊಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಪ್ರತ್ಯೇಕ ಆಸ್ಪತ್ರೆಗೆ ಆಸ್ಪತ್ರೆ ನೀಡಿರುವುದು ಒಳ್ಳೆಯದಾಗಿದೆ.  ಈಗಾಗಲೇ ಆಸ್ಪತ್ರೆಗೆ ಬೇಕಾದ ಜಮೀನನ್ನು ಮೆದೇಹಳ್ಳಿ ಸಮೀಪ ಗುರುತಿಸಿದ್ದೇವೆ. ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ. ಮುಂದಿನ ಪ್ರಕ್ರಿಯೆ ಕುರಿತು ಚರ್ಚಿಸಲಾಗುತ್ತದೆ’ ಎಂದು ಆಯುಷ್ ಇಲಾಖೆಯ ಡಾ. ಸುಜಾತಾ ಪಾಟೀಲ್  ಮಾಹಿತಿ ನೀಡಿದರು.

ಏನಿದು ರಕ್ತ ವಿದಳನ ಘಟಕ ?

ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿದಳನ ಘಟಕ ಸ್ಥಾಪನೆಗೆ ಸರ್ಕಾರ ಬಜೆಟ್ ನಲ್ಲಿ ಹಣ ತೆಗೆದಿಟ್ಟಿದೆ. ಇಲ್ಲಿಯವರೆಗೂ ಜಿಲ್ಲಾಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್  (ರಕ್ತನಿಧಿ) ಮಾತ್ರ ಇತ್ತು. ರಕ್ತ ವಿದಳನ ಘಟಕ ಸ್ಥಾಪನೆಯಿಂದ ರಕ್ತದಿಂದ ಬೇರೆ ಬೇರೆ ಕೋಶಗಳನ್ನು ಪ್ರತ್ಯೇಕಿಸಿ ಅಗತ್ಯವಿದ್ದ ರೋಗಿಗಳಿಗೆ ಕೊಡಲು ಸಾಧ್ಯವಿದೆ.

ಪ್ರಸ್ತುತ ಡೆಂಗಿ ರೋಗದಿಂದ ಬಳಲಸುತ್ತಿರುವ ರಕ್ತದ ಪ್ಲೇಟ್ ಲೆಟ್ಸ್ ಗಳನ್ನು ಕೊಡಬೇಕು ಅನೀಮಿಯಾ (ರಕ್ತ ಹೀನತೆ) ರೋಗಿಗಳಿಗೆ, ಗರ್ಭಿಣಿಯರಿಗೆ ರಕ್ತಕೋಶಗಳನ್ನು ಪ್ರತ್ಯೇಕಿಸಿ ಕೊಡಬೇಕು. ಇಂಥ ಸಂದರ್ಭದಲ್ಲಿ ರಕ್ತ ವಿದಳನ ಘಟಕ ತುಂಬಾ ಸಹಾಯವಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ  ಡಾ. ಜಗದೀಶ್  ತಿಳಿಸಿದ್ದಾರೆ.

‘ಇಲ್ಲಿಯವರೆವಿಗೂ ಡೆಂಗಿ ರೋಗಿಗಳಿಗೆ ರಕ್ತದ ಪ್ಲೇಟ್ಸ್‌ಗಳು ಅಗತ್ಯವಿದ್ದಾಗ ಹೊರಗಡೆ ಖಾಸಗಿ ಆಸ್ಪತ್ರೆಗಳಿಂದ ಪಡೆಯುತ್ತಿದ್ದೆವು. ಜಿಲ್ಲಾಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲೇ ಘಟಕ ಸ್ಥಾಪನೆಯಾಗುವುದರಿಂದ ತುಂಬಾ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.