ADVERTISEMENT

ಗ್ರಾಮಗಳಿಗೆ ಬರುತ್ತಿವೆ ಸಿದ್ಧ ಶೌಚಾಲಯ

6 ಅಡಿ ಎತ್ತರ, 3 ಅಡಿ ಅಗಲ, 3 ಅಡಿ ಉದ್ದದ ಶೌಚಾಲಯ ನಿರ್ಮಾಣ * ಎರಡು ಅಡಿ ಎತ್ತರಕ್ಕೆ ಟೈಲ್ಸ್ ಅಳವಡಿಕೆ

ಗಾಣಧಾಳು ಶ್ರೀಕಂಠ
Published 25 ಅಕ್ಟೋಬರ್ 2016, 10:38 IST
Last Updated 25 ಅಕ್ಟೋಬರ್ 2016, 10:38 IST
ಗ್ರಾಮಗಳಿಗೆ ಬರುತ್ತಿವೆ ಸಿದ್ಧ ಶೌಚಾಲಯ
ಗ್ರಾಮಗಳಿಗೆ ಬರುತ್ತಿವೆ ಸಿದ್ಧ ಶೌಚಾಲಯ   

ಚಿತ್ರದುರ್ಗ: ಒಂದೂವರೆ ಅಡಿ ಅಳತೆಯ ಎಂಟು ಸಿಮೆಂಟ್ ಮೌಲ್ಡ್ ಹಲಗೆಗಳು, ಒಂದು ಸಿಮೆಂಟ್ ತಳಪಾಯ, ನಾಲ್ಕೈದು ನಟ್ಟು ಬೋಲ್ಟ್, ಒಂದೆರಡು ಗಂಟೆಯಲ್ಲಿ 54 ಚದರ ಅಡಿ ವಿಸ್ತೀರ್ಣದ ಸಿದ್ಧ (ರೆಡಿಮೇಡ್) ಶೌಚಾಲಯ ಸಿದ್ಧ..!

ಇದು ತಾಲ್ಲೂಕಿನ ಮುದ್ದಾಪುರ ಸಮೀಪದ ಸಿದ್ದವ್ವನದುರ್ಗದ ಯುವಕ ಬಿ.ಎಸ್.ಯೋಗಾನಂದ ತಯಾರಿಸಿ ಸರಬರಾಜು ಮಾಡುತ್ತಿರುವ ಸಿಮೆಂಟ್‌ನಿಂದ ಸಿದ್ಧಗೊಂಡ ಶೌಚಾಲಯ. ನಾಲ್ಕೈದು ತಿಂಗಳಿನಿಂದ 70 ಶೌಚಾಲಯ­ಗಳನ್ನು ನಿರ್ಮಿಸಿ, ತಮ್ಮೂರಿನ ಫಲಾನುಭವಿಗಳಿಗೆ ಕೊಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಶೌಚಾಲಯಗಳಿಗೆ ಬೇಡಿಕೆ ಬರುತ್ತಿವೆ.

ಐಡಿಯಾ ಬಂದಿದ್ದು ಹೇಗೆ ?: ಕೃಷಿ ಮತ್ತು ಗುತ್ತಿಗೆ ಕೆಲಸ ಮಾಡುತ್ತಿದ್ದ ಯೋಗಾನಂದ್ ಒಮ್ಮೆ ದೆಹಲಿಯ ಜಂತರ್ ಮಂತರ್ ಗೆ ಹೋಗಿದ್ದಾಗ ಅಲ್ಲಿ ಫೈಬರ್ ಮತ್ತು ಫೋಮ್‌ನಿಂದ ಮಾಡಿದ ಸಿದ್ಧ ಶೌಚಾಲಯ ನೋಡಿದರು. ಹೀಗೆ, ಒಮ್ಮೆ ಆಂಧ್ರ ಸುತ್ತಾಡುತ್ತಿದ್ದಾಗ ಅಲ್ಲಿನ ಕಡಪ ಕಲ್ಲಿನಿಂದ ನಿರ್ಮಿಸಿದ್ದ ಶೌಚಾಲಯ ಇವರನ್ನು ಆಕರ್ಷಿ­ಸಿತು. ಜತೆಗೆ ಐದಾರು ತಿಂಗಳ ಹಿಂದೆ ದಾವಣಗೆರೆಯಲ್ಲಿ ಕೊಪ್ಪಳದವರು ನಿರ್ಮಿಸುತ್ತಿದ್ದ ಸಿಮೆಂಟ್ ಹಲಗೆಗಳ ಶೌಚಾಲಯಗಳು ಇವರಿಗೆ ಪ್ರೇರಣೆಯಾದವು. ಇವುಗಳನ್ನು ನೋಡಿ ಬಂದ ನಂತರ ‘ತಾನೂ ಏಕೆ ಪ್ರಯತ್ನಿಸಬಾರದು ಎಂದು’ ನಿರ್ಧರಿಸಿ, ಸಿದ್ದವ್ವನದುರ್ಗದಲ್ಲೇ ಪ್ರಾಯೋಗಿಕವಾಗಿ ಸಿಮೆಂಟ್ ರೆಡಿಮೇಡ್ ಶೌಚಾಲಯ ನಿರ್ಮಾಣ ಆರಂಭಿಸಿದರು. 

ನಿರ್ಮಾಣದ ವಿಧಾನ ಹೀಗಿದೆ: ಸಿಮೆಂಟ್, ಜಲ್ಲಿ ಬಳಸಿ ಒಂದೂವರೆ ಅಡಿ ಅಗಲದ ಎಂಟು ಪ್ಲೇಟುಗಳನ್ನು ಸಿದ್ದಪಡಿಸಿಕೊಳ್ಳುತ್ತಾರೆ. ತಳಪಾಯ ಹಾಗೂ ತಾರಸಿ ಇದೇ ವಿಧಾನದಲ್ಲಿ ತಯಾರಿಸುತ್ತಾರೆ. ಬೇಡಿಕೆ ಸಲ್ಲಿಸಿದವರ ಮನೆಗೆ ಈ ಎಲ್ಲ ಪರಿಕರಗಳನ್ನು ಕೊಂಡೊಯ್ದು  ನಟ್ಟು– ಬೋಲ್ಟ್‌ಗಳನ್ನು ಬಳಸಿ ಪ್ಲೇಟ್‌ಗಳನ್ನು ಜೋಡಿಸಿ, ಶೌಚಾಲಯ ನಿರ್ಮಿಸುತ್ತಾರೆ.

ಸದ್ಯಕ್ಕೆ 6 ಅಡಿ ಎತ್ತರ, 3 ಅಡಿ ಅಗಲ 3 ಅಡಿ ಎತ್ತರದ ಶೌಚಾಲಯ ನಿರ್ಮಿಸುತ್ತಿದ್ದಾರೆ. ಕೆಳಭಾಗದಲ್ಲಿ ಗೋಡೆಗೆ 2 ಅಡಿ ಟೈಲ್ಸ್ ಹೊದಿಸುತ್ತಾರೆ. ಮೂರು ಗೋಡೆಗಳಲ್ಲೂ ‘ವಿ’ ಆಕಾರದ ವೆಂಟಿಲೇಟರ್‌ (ಗಾಳಿಯಾಡಲು) ವ್ಯವಸ್ಥೆ ಇದೆ. ಸಿಮೆಂಟ್ ಶೀಟಿನಲ್ಲಿ ಬಾಗಿಲು, ಗುಣಮಟ್ಟದ ಬೇಸಿನ್‌ ಜೋಡಿಸು­ತ್ತಾರೆ.

ಇವೆಲ್ಲದರ ಜತೆಗೆ ನೀರು ತುಂಬಿಟ್ಟುಕೊಳ್ಳಲು ಒಂದು ಸಿಮೆಂಟ್ ತೊಟ್ಟಿ ಕೊಡುತ್ತಾರೆ. ‘ ಕಟ್ಟಡ ನಿರ್ಮಾಣ ನಮ್ಮ ಜವಾಬ್ದಾರಿ. ಶೌಚದ ಗುಂಡಿ ಮಾಡಿ, ಸಂಪರ್ಕ ಕಲ್ಪಿಸಿ­ಕೊಳ್ಳುವುದು ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳು ವುದು ಫಲಾನುಭವಿಗಳಿಗೆ ಬಿಟ್ಟಿದ್ದು’ ಎಂದು ಯೋಗಾನಂದ ವಿವರಿಸುತ್ತಾರೆ.

ದಿನಕ್ಕೆ 10 ಶೌಚಾಲಯ ನಿರ್ಮಾಣ:  ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ₹ 12 ಸಾವಿರ ನಿಗದಿ ಮಾಡಿದೆ. ಅಷ್ಟೇ ಹಣದಲ್ಲಿ ಇಟ್ಟಿಗೆಯ ಕಟ್ಟಡ ಕಟ್ಟುವುದು ತುಸು ಕಷ್ಟ. ಆದರೆ ಆ ಹಣದಲ್ಲಿ ರೆಡಿಮೇಡ್ ಶೌಚಾಲಯ ಕಟ್ಟಬಹುದು. ಇದೂ 40 ವರ್ಷದವರೆಗೂ ಬಾಳಿಕೆ ಬರಬಹುದು ಎನ್ನುತ್ತಾರೆ ಯೋಗಾನಂದ್. ‘ಸದ್ಯ 8-10 ಕಾರ್ಮಿಕ ರನ್ನು ಕಾರ್ಮಿಕರನ್ನು ಬಳಸಿಕೊಂಡು ಶೌಚಾಲಯ ಮಾಡುತ್ತಿದ್ದೇನೆ. ಯಂತ್ರಗಳನ್ನು ಬಳಸಿದರೆ, ನಿರ್ಮಾಣದ ವೇಗವೂ ಹೆಚ್ಚುತ್ತದೆ. ಖರ್ಚು ಉಳಿದು ಬೆಲೆ ಕಡಿಮೆ ಆಗಬಹುದು’ ಎಂದು ಅಂದಾಜಿಸುತ್ತಾರೆ.

ಈಗ ದಿನಕ್ಕೆ 10 ಶೌಚಾಲಯಗಳನ್ನು ನಿರ್ಮಿಸುತ್ತಿದ್ದಾರೆ. ಎಲ್ಲೆಡೆಯಿಂದ ಬೇಡಿಕೆ ಬರುತ್ತಿದೆ. ಅನೇಕ ಫಲಾನುಭವಿ ಗಳು ರೆಡಿಮೇಡ್ ಶೌಚಾಲಯದ ಬಗ್ಗೆ ಆಸಕ್ತಿ ತೋರಿದ್ದಾರೆ. ಹಾಲಿ ಈ ಶೌಚಾಲಯ ಬಳಕೆದಾರರಿಂದ ಏನೂ ದೂರು ಬಂದಿಲ್ಲ. ಕೆಲವರು ವಿಸ್ತೀರ್ಣ ಹೆಚ್ಚು ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತಾರೆಂತೆ.

‘ಶೌಚಾಲಯ ನಿರ್ಮಾಣಕ್ಕೆ, ಹಣ, ಸಮಯದ ಕೊರತೆ ಎನ್ನುವವರು, ಕೆಲವು ಗ್ರಾಮ ಪಂಚಾಯ್ತಿಗಳು, ಜನಪ್ರತಿನಿಧಿಗಳೂ ಈ ಸಿದ್ಧ ಶೌಚಾಲಯದತ್ತ ಆಸಕ್ತಿತೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.