ADVERTISEMENT

ಚಾಲನಾ ಪರವಾನಗಿಗೆ ಸುಲಭ ಮಾರ್ಗ ಸಾರಥಿ 4.0

ಕೋಟೆನಾಡಿಗೂ ಕಾಲಿಟ್ಟ ಹೊಸ ಆ್ಯಪ್ ಮತ್ತು ತಂತ್ರಾಂಶ

ಕೆ.ಎಸ್.ಪ್ರಣವಕುಮಾರ್
Published 9 ಜೂನ್ 2018, 10:24 IST
Last Updated 9 ಜೂನ್ 2018, 10:24 IST
ಪರಿವಾಹನ್ ಸಾರಥಿ ಸೇವಾ.
ಪರಿವಾಹನ್ ಸಾರಥಿ ಸೇವಾ.   

ಚಿತ್ರದುರ್ಗ: ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ  ಆರ್‌ಟಿಒ ಕಚೇರಿಗೆ ಅಲೆಯಬೇಕಿಲ್ಲ. ದಿನಗಟ್ಟಲೆ ಅರ್ಜಿ ಹಿಡಿದು ಕಾಯಬೇಕಿಲ್ಲ. ಈ ಪ್ರಕ್ರಿಯೆ ಇನ್ನೂ ಮುಂದೆ ಪ್ರಕ್ರಿಯೆಯೂ ಜನಸ್ನೇಹಿಯಾಗಲಿದೆ. ಅದಕ್ಕಾಗಿ ಸಾರಥಿ 4.0... ಹೊಸ ತಂತ್ರಾಂಶ ಬಂದಿದೆ.

ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆ ಈ ಹಿಂದೆ ಕಷ್ಟಕರವಾಗಿತ್ತು. ಇದನ್ನು ಸರಳಗೊಳಿಸುವ ಉದ್ದೇಶದಿಂದ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಆಯುಕ್ತರ (ಆರ್‌ಟಿಒ) ಕಚೇರಿಯಲ್ಲಿ ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದ್ದು, ಎಲ್‌ಎಲ್‌ಆರ್ ಮತ್ತು ವಾಹನ ಚಾಲನಾ ಪರವಾನಗಿ ಪಡೆಯುವ ಹೊಸ ಆ್ಯಪ್ ಹಾಗೂ ತಂತ್ರಾಂಶ ಕೋಟೆನಾಡಿಗೂ ಕಾಲಿಟ್ಟಿದೆ.

ಡಿಜಿಟಲ್ ಇಂಡಿಯಾಕ್ಕೆ ಮನ್ನಣೆ: ಭ್ರಷ್ಟಾಚಾರ ನಿಯಂತ್ರಣ ಹಾಗೂ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಿಸಲಿಕ್ಕಾಗಿ ಕೇಂದ್ರ ಸರ್ಕಾರವೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ಅವಧಿಯಲ್ಲಿ ಎಲ್‌ಎಲ್‌ಆರ್, ಡಿಎಲ್ ಪಡೆಯಲು ಅವಕಾಶ ಕಲ್ಪಿಸಿದೆ. ಡಿಜಿಟಲ್ ಇಂಡಿಯಾ ಯೋಜನೆ ಅಂಗವಾಗಿಯೇ ಈ ಹೊಸ ಆ್ಯಪ್ ಬಿಡುಗಡೆಗೊಳಿಸಿದೆ.

ADVERTISEMENT

ಅರ್ಜಿ ಸಲ್ಲಿಸುವುದು ಹೇಗೆ: ಜಿಲ್ಲೆಯಲ್ಲಿ ಎಲ್ಎಲ್ಆರ್ ಮತ್ತು ಚಾಲನಾ ಪರವಾನಗಿ ಪಡೆಯಲು ಇಚ್ಛಿಸುವವರು ‘ಪರಿವಾಹನ್’ ಎಂಬ ಜಾಲತಾಣದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ, ಅದರೊಂದಿಗೆ ಆಧಾರ್ ಕಾರ್ಡ್, ಭಾವಚಿತ್ರ, ಸಹಿ, ಹುಟ್ಟಿದ ದಿನಾಂಕದ ವಿವರ ಸೇರಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ದೀಪಕ್.

ಶುಲ್ಕವನ್ನು ಸಹ ಆನ್‌ಲೈನ್‌ನಲ್ಲಿಯೇ ಪಾವತಿ ಮಾಡಬೇಕು. ಅರ್ಜಿ ಭರ್ತಿ ಮಾಡುವಾಗ ಅರ್ಜಿದಾರ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಬೇಕು. ಅಂತರ್ಜಾಲ ಬ್ಯಾಂಕ್ ಸೌಲಭ್ಯ ಹೊಂದಿದ್ದಲ್ಲಿ ‘ಪೇಮೆಂಟ್ ಆಫ್ ಫೀ’ (payment of fee) ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ, ರಸೀತಿ ಮುದ್ರಿಸಿಕೊಳ್ಳಬಹುದು. ಈ ಸೌಲಭ್ಯ ಹೊಂದಿಲ್ಲದಿದ್ದಲ್ಲಿ ಕಚೇರಿಯ ನಗದು ಶಾಖೆಯಲ್ಲೂ ಪಾವತಿ ಮಾಡಲು ಅವಕಾಶವಿದೆ ಎನ್ನುತ್ತಾರೆ ಅವರು.

ಒಂದು ವಾರದಿಂದ ‘ಸಾರಥಿ–4’ ಚಾಲ್ತಿಯಲ್ಲಿದೆ. https://parivahan.gov.in ವೆಬ್‌ಸೈಟ್ ಸಂಪರ್ಕಿಸಿ, ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ ಆರ್‌ಟಿಒ.

ಉತ್ತೀರ್ಣಕ್ಕೆ 10 ಅಂಕ ಕಡ್ಡಾಯ:

ಚಾಲನಾ ಅನುಜ್ಞಾ ಪತ್ರ ಪರೀಕ್ಷೆಗಾಗಿ ದಿನಾಂಕ ಮತ್ತು ವೇಳೆಯನ್ನು ನಿಗದಿ ಪಡಿಸಿಕೊಳ್ಳಬೇಕು. ಪರೀಕ್ಷೆ ಕೂಡ ಆನ್‌ಲೈನ್‌ನಲ್ಲೇ ನಡೆಯಲಿದ್ದು, ಯಾವ ಭಾಷೆ ಬೇಕು ಎಂಬುದನ್ನು ಸಹ ಅರ್ಜಿದಾರ ಆಯ್ಕೆ ಮಾಡಿಕೊಳ್ಳಬಹುದು. ಸಂಬಂಧಪಟ್ಟ ಪ್ರಶ್ನೆಗಳು ಗಣಕಯಂತ್ರದಲ್ಲಿರುತ್ತವೆ. 15 ಪ್ರಶ್ನೆ ಕಡ್ಡಾಯವಾಗಿದ್ದು, ಪ್ರತಿಯೊಂದಕ್ಕೂ ಒಂದು ಅಂಕ ಇರಲಿದೆ. 10 ಅಂಕ ಪಡೆದವರು ಎಲ್‌ಎಲ್‌ಆರ್ ಪಡೆಯಲಿಕ್ಕೆ ಅರ್ಹರಾಗಲಿದ್ದಾರೆ ಎಂದು ದೀಪಕ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚಾಲನಾ ಪರವಾನಗಿ ಪತ್ರ ನೀಡುವ ಪ್ರಕ್ರಿಯೆಯಲ್ಲಿ ಚುರುಕು ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ನೂತನ ತಂತ್ರಾಂಶ ಜಿಲ್ಲೆಯಲ್ಲಿ ಬಳಕೆಯಾಗಲಿದೆ.
- ಎಲ್.ದೀಪಕ್, ಆರ್‌ಟಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.