ADVERTISEMENT

ಚಿತ್ರದುರ್ಗವನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಿ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 10:01 IST
Last Updated 30 ಸೆಪ್ಟೆಂಬರ್ 2014, 10:01 IST

ಚಿತ್ರದುರ್ಗ: ‘ಒಂದು ಹೋಬಳಿಯಲ್ಲಿ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ ಯಿಂದಾಗಿ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ರಾಜ್ಯ ಸರ್ಕಾರ ಚಿತ್ರದುರ್ಗವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಟಿ. ನುಲೇನೂರು ಎಂ.ಶಂಕರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ‘ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಶೇಂಗಾ ಬೆಳೆ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ’ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿದ್ದ ‘ರೈತರ ಬೃಹತ್ ರಸ್ತೆ ತಡೆ ಚಳವಳಿ’ಯಲ್ಲಿ ಅವರು ಮಾತನಾಡಿದರು.

ಬರ–ನೆರೆ ಪಟ್ಟಿಗೆ ಸೇರಿಸಿ: ‘ನಮ್ಮ ಜಿಲ್ಲೆಗೆ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲ. ಕೊಳವೆ ಬಾವಿಯಲ್ಲಿ ಸಿಗುವ ಅಲ್ಪ ಸಲ್ಪ ನೀರಿನಿಂದ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆದಿರುವ ಕೆಲವು ಭಾಗದ ರೈತರಿಗೆ ಈ ಬಾರಿ ಮಘೆ ಮಳೆ ತೊಂದರೆ ಮಾಡಿದೆ. ಮತ್ತೊಂದು ಕಡೆ ಮಳೆ ಕೊರತೆಯಿಂದಾಗಿ ಶೇಂಗಾ ನೆಲಕಚ್ಚಿದೆ. ಇನ್ನೂ ಕೆಲವೆಡೆ ಮೆಕ್ಕೆಜೋಳ ನಾಶವಾಗಿದೆ.

ಈಗಿರುವ ಬೆಳೆ ಮಾರಾಟಕ್ಕಿಟ್ಟರೆ ಬೆಲೆ ಕಡಿಮೆ, ಖರೀದಿಸುವ ವ್ಯಾಪಾರಸ್ಥರ ಕೊರತೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈಗಷ್ಟೇ ಘೋಷಿಸಿರುವ ಬರ ಪೀಡಿತ ಮತ್ತು ನೆರೆ ಪೀಡಿತ ಪಟ್ಟಿಗಳಲ್ಲಿ ನಮ್ಮ ಜಿಲ್ಲೆಯ ಸಂತ್ರಸ್ತ ತಾಲ್ಲೂಕು ಅಥವಾ ಹೋಬಳಿಗಳನ್ನು ಸೇರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬೆಂಬಲ ಬೆಲೆ ನಿಗದಿಪಡಿಸಿ: ಒಂದು ಕೆ.ಜಿ ಈರುಳ್ಳಿ ಬೆಳೆಯಲು ₨ 10 ರಿಂದ ₨ 12 ಉತ್ಪಾದನಾ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿಯನ್ನು ₨ 6 ರಿಂದ ₨ 8 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದ ಅಸಲು ನಷ್ಟವಾಗುವ ಜತೆಗೆ, ರೈತರು ಸಾಲದಲ್ಲಿ ಸಿಲುಕುತ್ತಾರೆ. ಹಾಗಾಗಿ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ ₨ 3 ಸಾವಿರ, ಹತ್ತಿ ಮತ್ತು ಶೇಂಗಾ ಬೆಳೆಗೆ ಕ್ವಿಂಟಲ್‌ಗೆ ₨  7 ಸಾವಿರ, ಮೆಕ್ಕೆಜೋಳ ಕ್ವಿಂಟಲ್‌ಗೆ ₨  2 ಸಾವಿರದಂತೆ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಆಮದು ನಿಲ್ಲಿಸಿ, ರಫ್ತು ತೆರಿಗೆ ತೆಗೆಯಿರಿ: ಕೇಂದ್ರ ಸರ್ಕಾರ ಹೊರ ರಾಷ್ಟ್ರಗಳಿಂದ ಆಮದಾಗುತ್ತಿರುವ ಈರುಳ್ಳಿಯನ್ನು ನಿಷೇಧಿಸಬೇಕು. ನಮ್ಮ ಈರುಳ್ಳಿಯ ರಫ್ತು ಮೇಲೆ ವಿಧಿಸಿರುವ ತೆರಿಗೆಯನ್ನು ತೆಗೆಯಬೇಕು. ಮುಕ್ತವಾಗಿ ಮಾರಾಟಕ್ಕೆ ಅವಕಾಶ ನೀಡಬೇಕು. ದೆಹಲಿಯಲ್ಲಿ ಮುನ್ನೂರು ಮಳಿಗೆ ನಿರ್ಮಿಸಿ,
₨  10ರಂತೆ ಕೆ.ಜಿ ಈರುಳ್ಳಿ ಮಾರಾಟ ಮಾಡಿಸುತ್ತಿರುವುದನ್ನು ನಿಲ್ಲಿಸಿ, ನಮ್ಮ ಬೆಳೆಗಾರರಿಂದಲೇ ಕ್ವಿಂಟಲ್‌ಗೆ ₨ 3,000 ಬೆಲೆ ನೀಡಿ, ಈರುಳ್ಳಿ ಖರೀದಿಸಿ, ಗ್ರಾಹಕರಿಗೆ ವಿತರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಕೆ.ಜಿ. ಭೂಮಾರೆಡ್ಡಿ, ಉಪಾಧ್ಯಕ್ಷ ಆರ್‌.ಎಚ್. ಮಹಾದೇವಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಬಿ. ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಧನಂಜಯ, ಎಸ್. ಎಚ್.ಪರಶುರಾಮ, ಕೆ.ಪಿ.ಭೂತಪ್ಪ, ಪುಟ್ಟಸ್ವಾಮಿ, ಎಸ್. ಬಿ. ಶಿವಕುಮಾರ್, ಭರತೇಶರ್ ರೆಡ್ಡಿ, ಜಯರಾಮ ರೆಡ್ಡಿ, ತಿಮ್ಮಣ್ಣ, ಶಿವಣ್ಣ, ಸತೀಶರ್, ಮಂಜಣ್ಣ, ಮೂಲೆಮನೆ ವೀರಭಧ್ರಪ್ಪ, ರವಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.