ADVERTISEMENT

ಧಾರ್ಮಿಕ ಕಾರ್ಯಗಳು ಸತ್ಕಾರ್ಯಕ್ಕೆ ಪ್ರೇರಣೆ

ದೇವಾಲಯ ಲೋಕಾರ್ಪಣೆ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಮುರುಘಾ ಶರಣರ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 5:41 IST
Last Updated 9 ಮಾರ್ಚ್ 2017, 5:41 IST
ಶ್ರೀರಾಂಪುರ: ‘ಧಾರ್ಮಿಕ ಕಾರ್ಯಗಳು ಮನುಷ್ಯನಿಗೆ ಸತ್ಕಾರ್ಯ ಮಾಡಲು ಪ್ರೇರೇಪಿಸುತ್ತದೆ’ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
 
ಹೋಬಳಿಯ ಎಸ್.ನೇರಲಕೆರೆ ಗ್ರಾಮದಲ್ಲಿ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಾಲಯ ಲೋಕಾರ್ಪಣೆ ಪ್ರಯುಕ್ತ ಬುಧವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
 
ದೇವರ ಕಾರ್ಯಗಳಿಗಿಂತ ಧರ್ಮಕಾರ್ಯಗಳು ಉತ್ತಮ. ಸಮಾವೇಶ, ಜನಜಾಗೃತಿ, ವಿಚಾರ ಸಂಕಿರಣ, ದಾರ್ಶನಿಕರ ವಿಚಾರಗಳ ಮೂಲಕ ಮನುಷ್ಯ ನಾಗರಿಕನಾಗುವನು. ಬಸವಣ್ಣ, ಕನಕ, ಭಗೀರಥ, ವಾಲ್ಮೀಕಿ, ಬುದ್ಧ ಮುಂತಾದ ದಾರ್ಶನಿಕರು ಸಮಾಜದಲ್ಲಿನ ಹುಳುಕುಗಳನ್ನು ಸರಿಪಡಿಸುತ್ತಾ, ಸಾಮಾಜಿಕ ಸಾಮರಸ್ಯಕ್ಕೆ ಶ್ರಮಿಸಿದ್ದಾರೆ ಎಂದರು.
 
ಧಾರ್ಮಿಕ ಸಭೆ ಅಂಗವಾಗಿ ಭಗೀರಥ ಪೀಠದ ಪುರುಷೋತ್ತಮಾ ನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಕನಕ ಮಠದ ಈಶ್ವರನಂದಪುರಿ ಸ್ವಾಮೀಜಿಗಳನ್ನು ಬೆಳ್ಳಿರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
 
ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿ, ‘ಮಹಿಳೆಯನ್ನು ಗೌರವಿಸುವುದರ ಮೂಲಕ ಅವರ ರಕ್ಷಣೆ ಆಗಬೇಕು. ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು, ದುಷ್ಟ ತಾಯಿ ಇರುವುದಿಲ್ಲ. ಮಹಿಳೆಯ ಸ್ಥಾನವನ್ನು ಯಾರೂ ತುಂಬುವುದಿಲ್ಲ. ಮಹಿಳೆಯರು ಎಲ್ಲಿ ಪೂಜಿಸಲ್‍ಪಡುವರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದರು.
 
ಹೈಕೋರ್ಟ್‌ ನಿವೃತ್ತ ನ್ಯಾಯ ಮೂರ್ತಿ ಎಚ್.ಬಿಲ್ಲಪ್ಪ ಪ್ರಾಸ್ತಾವಿಕ ಮಾತನಾಡಿ, ದೇವಾಲಯಗಳು ಶಕ್ತಿ ಮತ್ತು ಸಂಸ್ಕಾರವನ್ನು ನೀಡುವ ಪ್ರಾರ್ಥನಾ ಮಂದಿರಗಳು. ಅಸಂಖ್ಯ ಪ್ರಾಣಿಗಳಲ್ಲಿ ಮನುಷ್ಯನೇ ಬುದ್ಧಿಜೀವಿ. ಆದರೂ ಅವನು ಅಜ್ಞಾನ, ಮೌಡ್ಯ, ಕಂದಾಚಾರಕ್ಕೆ ಸಿಲುಕಿದ್ದಾನೆ ಎಂದರು.
 
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿದರು. ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮಿ ಹಾಗೂ ಹೊಸದುರ್ಗ ಕನಕಮಠದ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.
 
ಕಾರ್ಯಕ್ರಮದಲ್ಲಿ ಲಕ್ಷ್ಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಮೋಹನ್, ಕಾರ್ಯದರ್ಶಿ ಆರ್.ಲಕ್ಷ್ಮಯ್ಯ, ನಿರ್ದೇಶಕ ಪಟೇಲ್ ರಂಗಪ್ಪ, ರಾಜಶೇಖರಯ್ಯ, ಡಿ.ಮಂಜುನಾಥ, ಕೃಷ್ಣಮೂರ್ತಿ, ದೇವೇಂದ್ರಪ್ಪ, ರಂಗನಾಥ, ಲೋಕೇಶ್ ಮತ್ತು ಜನಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.