ADVERTISEMENT

ನದಿಗೆ ಶೌಚ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:12 IST
Last Updated 22 ಮೇ 2017, 5:12 IST

ಹಿರಿಯೂರು: ನಗರದ ನವನಗರ ಬಡಾವಣೆಯ ಕೆಲವರು ಶೌಚದ ಗುಂಡಿ ನಿರ್ಮಿಸಿಕೊಳ್ಳದೆ ಪೈಪ್ ಲೈನ್ ಮೂಲಕ ತ್ಯಾಜ್ಯವನ್ನು ನೇರವಾಗಿ ವೇದಾವತಿ ನದಿಗೆ ಬಿಡುತ್ತಿರುವ ಕಾರಣ ಜನ–ಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ವಾರ್ಡ್‌ನ ನಗರ ಸಭಾ ಸದಸ್ಯ ಎಸ್‌ಪಿಟಿ ದಾದಾಪೀರ್ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ನಿವಾಸಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಈಗಾಗಲೇ ನಗರದ ಚರಂಡಿ ನೀರಿನ ತ್ಯಾಜ್ಯವನ್ನು ನದಿಗೆ ಹರಿಸುವ ಮೂಲಕ ಕಲುಷಿತಗೊಳಿಸಲಾಗಿದೆ. ಈಗ ಶೌಚದ ತ್ಯಾಜ್ಯ ಹರಿಸಿ ಇನ್ನಷ್ಟು ಮಲೀನಗೊಳಿಸಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ನೆಲೆಸಿರುವ ಜನರ ಬದುಕು ಅಸಹನೀಯವಾಗುತ್ತದೆ. ನಗರಸಭೆ ಆಯುಕ್ತರು ತಕ್ಷಣ ಸ್ಥಳ ಪರಿಶೀಲನೆ ಮಾಡಿ ತ್ಯಾಜ್ಯ ಹರಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಅಧ್ಯಕ್ಷರ ಸ್ಪಷ್ಟನೆ : ‘ಮೂರ್ನಾಲ್ಕು ಬಡಾವಣೆಗಳನ್ನು ಹೊರತು ಪಡಿಸಿದರೆ ಎಲ್ಲ ಬಡಾವಣೆಗಳ ತ್ಯಾಜ್ಯವನ್ನು ದಶಕಗಳಿಂದ ವೇದಾವತಿ ನದಿ ಹಾಗೂ ವಾಣಿ ವಿಲಾಸ ಜಲಾಶಯದ ನಾಲೆಗಳಿಗೆ ಬಿಡಲಾಗುತ್ತಿದೆ. ವಿರೋಧ ಮಾಡುವುದಾದರೆ ನದಿಗೆ ತ್ಯಾಜ್ಯ ಬಿಡುತ್ತಿರುವ ವ್ಯವಸ್ಥೆಯನ್ನು ವಿರೋಧಿಸಲಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಜಬೀವುಲ್ಲಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ನಗರಸಭೆಯಿಂದ ಈ ವೇಳೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕಿತ್ತು. ಅದಾದರೆ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ನಾಗರಿಕರ ಆರೋಗ್ಯ ಹಾಗೂ
ನದಿಯ ಸ್ವಚ್ಛತೆ ಕಾಪಾಡುವ ಹಿನ್ನೆಲೆಯಲ್ಲಿ ನದಿಗೆ ಬಿಡುತ್ತಿರುವ ತ್ಯಾಜ್ಯವನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಂಸ್ಕರಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.