ADVERTISEMENT

ನೀರಿನ ಕಾಮಗಾರಿ ಶೀಘ್ರ ಮುಗಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 8:44 IST
Last Updated 17 ಜುಲೈ 2017, 8:44 IST

ಹಿರಿಯೂರು: ತಾಲ್ಲೂಕಿನಲ್ಲಿ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಇಲ್ಲವಾದರೆ ಜನರ ವಿಶ್ವಾಸ ಗಳಿಸುವುದು ಹೇಗೆ, ಚುನಾವಣೆ ಎದುರಿಸುವುದು ಹೇಗೆ  ಎಂದು ಶಾಸಕ ಡಿ.ಸುಧಾಕರ್ ಪ್ರಶ್ನಿಸಿದರು. ನಗರದ ಹುಳಿಯಾರು ರಸ್ತೆಯಲ್ಲಿ ಇರುವ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಬರ ಕಾಮಗಾರಿ ಪರಿಶೀಲನೆ ಮತ್ತು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ಯೋಜನೆ ತಾಲ್ಲೂಕಿನ ಜನರ ಬಹು ವರ್ಷಗಳ ಕನಸು. ತಾಲ್ಲೂಕಿನಲ್ಲಿ ವಿ.ವಿ ಸಾಗರ ಮತ್ತು ಗಾಯತ್ರಿ ಜಲಾಶಯಗಳಿದ್ದರೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ₹ 40 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ.

ಅಧಿಕಾರಿಗಳ ವಿಳಂಬ ಧೋರಣೆಯಿಂದ ಯೋಜನೆ ಕುಂಟುತ್ತಾ ಸಾಗಿದೆ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ, ಶುದ್ಧ ನೀರು ಪೂರೈಕೆ ಮಾಡಿದರೆ ಮಾತ್ರ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಂತಾಗುತ್ತದೆ. ಅಧಿಕಾರಿಗಳು ಕಾರ್ಯ ನಿರ್ವಹಿಸಿ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್ಚರಿಕೆ ನೀಡಿದರು.

ADVERTISEMENT

ಇಂಟರ್‌ನೆಟ್ ಸಮಸ್ಯೆ:  ಗ್ರಾಮೀಣ ಭಾಗದ ಜನರಿಗೆ ಅನಗತ್ಯ ಅಲೆದಾಟ ತಪ್ಪಿಸಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಆರಂಭಿಸಿ
ರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದ ಪಹಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ ಎಂದು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ತಿಳಿಸಿದರು.

ಆಗ  ಬಿಎಸ್‌ಎನ್‌ಎಲ್ ಅಧಿಕಾರಿ ಸತ್ಯೇಂದ್ರ ಪ್ರಕಾಶ್ ಮಾತನಾಡಿ, ‘ತಾಲ್ಲೂಕಿನಲ್ಲಿ 29 ಗ್ರಾಮ ಪಂಚಾಯ್ತಿಗಳಿಗೆ ಈಗಾಗಲೇ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ. 14 ಗ್ರಾಮ ಪಂಚಾಯ್ತಿಗಳು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಿಲ್ಲ. ರಸ್ತೆ, ಚರಂಡಿ ಮೊದಲಾದ ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ವೈರ್ ತುಂಡಾಗಿರುವು
ದರಿಂದ ಸಮಸ್ಯೆಯಾಗುತ್ತಿದೆ’ ಎಂದರು.

ನೀರು ಖಾಲಿ: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ ಪ್ರಸ್ತುತ ಇರುವ 63 ಅಡಿ ನೀರು ಮುಂದಿನ ಮೂರು ತಿಂಗಳು ಕುಡಿಯಲು ಸಾಕಾಗುತ್ತದೆ. ಚಿತ್ರದುರ್ಗ ನಗರಕ್ಕೆ ಎರಡು ದಿನಕ್ಕೊಮ್ಮೆ 70 ಲಕ್ಷ ಲೀಟರ್, ಹಿರಿಯೂರು ನಗರಕ್ಕೆ ನಾಲ್ಕು ದಿನಕ್ಕೊಮ್ಮೆ 130 ಲಕ್ಷ ಲೀಟರ್ ನೀರು ಕೊಡಲಾಗುತ್ತಿದೆ. ಚಿತ್ರದುರ್ಗದಲ್ಲಿ ನೀರು ಹೆಚ್ಚು ಪೋಲಾಗುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಎಚ್ಚರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರ ನಾಯ್ಕ್, ಸದಸ್ಯರಾದ ಗೀತಾ ನಾಗಕುಮಾರ್, ಶಶಿಕಲಾ ಸುರೇಶ್ ಬಾಬು, ಪಾಪಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಸದಸ್ಯರಾದ ಮುಕುಂದ್, ಓಂಕಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.