ADVERTISEMENT

‘ಮಂತ್ರಮಾಂಗಲ್ಯ’ದಲ್ಲಿ ಪುಸ್ತಕ ಉಡುಗೊರೆ

ಕೋಟೆನಾಡಿನಲ್ಲಿ ವಿಶೇಷ ಕಲ್ಯಾಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:27 IST
Last Updated 24 ಏಪ್ರಿಲ್ 2018, 9:27 IST
ಚಿತ್ರದುರ್ಗದಲ್ಲಿ ಸೋಮವಾರ ನಡೆದ ನಾಗಭೂಷಣ ಪಟೇಲ್ ಮತ್ತು ಕಾವ್ಯಾ ಅವರ ವಿವಾಹ ಮಹೋತ್ಸವದಲ್ಲಿ ಕುವೆಂಪು ಅವರ ‘ಮಂತ್ರಮಾಂಗಲ್ಯ’ ಬೋಧಿಸಿದ ಸಾಹಿತಿ ಡಿ.ಎಸ್.ನಾಗಭೂಷಣ ಮತ್ತು ಪತ್ನಿ ಸವಿತಾ ನಾಗಭೂಷಣ
ಚಿತ್ರದುರ್ಗದಲ್ಲಿ ಸೋಮವಾರ ನಡೆದ ನಾಗಭೂಷಣ ಪಟೇಲ್ ಮತ್ತು ಕಾವ್ಯಾ ಅವರ ವಿವಾಹ ಮಹೋತ್ಸವದಲ್ಲಿ ಕುವೆಂಪು ಅವರ ‘ಮಂತ್ರಮಾಂಗಲ್ಯ’ ಬೋಧಿಸಿದ ಸಾಹಿತಿ ಡಿ.ಎಸ್.ನಾಗಭೂಷಣ ಮತ್ತು ಪತ್ನಿ ಸವಿತಾ ನಾಗಭೂಷಣ   

ಚಿತ್ರದುರ್ಗ: ಅದು ಮದುವೆ ಛತ್ರ. ಆದರೆ, ವಾದ್ಯವಿಲ್ಲ. ಮಂತ್ರಘೋಷಗಳಿಲ್ಲ. ಬದಲಿಗೆ ಬಂಧುಗಳ ಹಿತ ನುಡಿಗಳೇ ಮಂತ್ರಘೋಷವಾಗಿತ್ತು. ಅತಿಥಿಗಳ ಹಾರೈಕೆಯೇ ‌ಗಟ್ಟಿಮೇಳವಾಗಿತ್ತು. ಹಸಿದ ಹೊಟ್ಟೆಗೆ ರುಚಿಯಾದ ಊಟವಾದರೆ, ಮದುವೆ ಮನೆಯಿಂದ ಹೊರಟ ಅತಿಥಿಗಳಿಗೆ ‘ಪುಸ್ತಕದ ತಾಂಬೂಲ’ದ ಉಡುಗೊರೆ!

ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ನಡೆದ ನಾಯಕನಹಟ್ಟಿ ಸಮೀಪದ ಚೌಳೂರಿನ ನಾಗಭೂಷಣ ಪಟೇಲ್ ಮತ್ತು ಕಾವ್ಯಾ ಅವರ ವಿವಾಹ ಮಹೋತ್ಸವದಲ್ಲಿ ಕಂಡುಬಂದ ದೃಶ್ಯವಿದು.

ವಧು–ವರರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು. ಚಳ್ಳಕೆರೆ ತಾಲ್ಲೂಕಿನ ಓಬಯ್ಯನಹಟ್ಟಿಯ
ಮಲ್ಲಿಕಾರ್ಜನಪ್ಪ ಪುತ್ರ ನಾಗಭೂಷಣ ಪಟೇಲ್ ಮತ್ತು ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ಮೋಹನ್ ಅವರ ಪುತ್ರಿ
ಕಾವ್ಯಾ ಅವರು ಸಂಪ್ರದಾಯಗಳನ್ನು ಬದಿಗಿಟ್ಟು, ಕುವೆಂಪು ಅವರ ‘ಮಂತ್ರಮಾಂಗಲ್ಯ’ದಂತೆ ವಿವಾಹವಾದರು.

ADVERTISEMENT

ಶಿವಮೊಗ್ಗದ ಲೇಖಕ ಡಿ.ಎಸ್.ನಾಗಭೂಷಣ ಮತ್ತು ಪತ್ನಿ ಕವಯಿತ್ರಿ ಸವಿತಾ ನಾಗಭೂಷಣ ವಧು–ವರರಿಗೆ ಮಂತ್ರಮಾಂಗಲ್ಯ ಬೋಧಿಸಿದರು. ಈ ದೃಶ್ಯಕಾವ್ಯಕ್ಕೆ ಸಾಹಿತಿ ವಡ್ಡಗೆರೆ ನಾಗರಾಜಯ್ಯ ಸೇರಿದಂತೆ ಕವಿಗಳು, ವಿಜ್ಞಾನಿಗಳು, ಚಿಂತಕರು, ಬಂಧುಗಳೆಲ್ಲ ಸಾಕ್ಷಿಯಾದರು.

ಪುಸ್ತಕ ತಾಂಬೂಲದ ವಿಶೇಷ:
ಮದುವೆಗೆ ಬಂದವರಿಗೆ ರುಚಿಯಾದ ಊಟದ ಜತೆಗೆ, ನಂತರ ತಾಂಬೂಲ ನೀಡಿದರು. ಆ ತಾಂಬೂಲದ ಕವರ್‌ನಲ್ಲಿ ಎಲೆ ಅಡಿಕೆ, ತೆಂಗಿನ ಕಾಯಿ ಇರಲಿಲ್ಲ. ಬದಲಿಗೆ ‘ಪುಸ್ತಕ ತಾಂಬೂಲ’ ಎಂಬ ಕವರ್‌ನಲ್ಲಿ ಡಿ.ಎಸ್. ನಾಗಭೂಷಣ ಅವರ ‘ಇಂದಿಗೆ ಬೇಕಾದ ಗಾಂಧಿ’ ಹಾಗೂ ಗಾಂಧೀಜಿ ಅವರ ಕೃತಿ ‘ಹಿಂದ್ ಸ್ವರಾಜ್’ ಕೃತಿಗಳನ್ನಿಟ್ಟು, ಉಡುಗೊರೆ ನೀಡಲಾಯಿತು. ಈ ಮೂಲಕ ಏಪ್ರಿಲ್ 23ರ ವಿಶ್ವ ಪುಸ್ತಕ ದಿನ’ವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲಾಯಿತು.

ಬಂದ ಅತಿಥಿಗಳಿಗೆಲ್ಲ ಪುಸ್ತಕ ತಾಂಬೂಲದ ಜತೆಗೆ, ಕುವೆಂಪು ಮಂತ್ರಮಾಂಗಲ್ಯದ ಕರಪತ್ರ, ‘ಹೊಸ ಮನುಷ್ಯ’– ಸಮಾಜವಾದಿ ಮಾಸಿಕ ಪತ್ರಿಕೆಯನ್ನು ಹಂಚಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.