ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಹಿರಿಯೂರು: ಮಹಿಳಾಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:48 IST
Last Updated 19 ಜನವರಿ 2017, 5:48 IST
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ   

ಹಿರಿಯೂರು: ದೇಶದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಮಹಿಳೆಯರೊಂದಿಗೆ ಮೃಗೀಯವಾಗಿ ವರ್ತಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಫೂರ್ತಿ ಮಹಿಳಾ ಅಧ್ಯಯನ ಸಂಸ್ಥೆಯ ಮಧ್ಯ ಕರ್ನಾಟಕದ
ಅಧ್ಯಕ್ಷೆ ಶಶಿಕಲಾ ರವಿಶಂಕರ್ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸ್ಫೂರ್ತಿ ಮಹಿಳಾ ಅಧ್ಯಯನ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್ ಸೇರಿದಂತೆ ಹಲವು ಮಹಿಳಾಪರ ಸಂಘಟನೆಗಳ
ನೇತೃತ್ವದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.

ಮಹಿಳೆಯರು ತಮ್ಮ ಸ್ವಶಕ್ತಿಯಿಂದ ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದರೂ ಅವರ ಮೇಲಿನ ಶೋಷಣೆ ನಿಂತಿಲ್ಲ. ಮಹಿಳೆಯರನ್ನು  ಅವಮಾನಿಸುವ, ಅಧೈರ್ಯಗೊಳಿಸುವ, ವಿಕೃತ ಕೆಲಸ ಮಾಡುತ್ತಿರುವುದು ಹೇಯ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನೆಯ ಒಳಗೆ, ಹೊರಗೆ ಮಾನವೀಯತೆಯ ಲವಲೇಶವೂ ಇಲ್ಲದ ಕೆಲವು ಕಾಮಾಂಧರು ಬಸ್ಸು, ಕಚೇರಿ, ರಸ್ತೆ ಎನ್ನದೇ ಮಹಿಳೆಯರನ್ನು ಶೋಷಿಸುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದು ಹೇಳಿದರು.

ಚಿತ್ರದುರ್ಗದ ಮಹಿಳಾ ಪರ ಹೋರಾಟಗಾರ್ತಿ ರಮಾ ನಾಗರಾಜ್ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅತ್ಯಾಚಾರ ಮಾಡುವಂತಹ ವಿಕೃತ ಪುರುಷರಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಮಹಿಳೆಯರಿಗೆ ರಕ್ಷಣೆ ಒದಗಿಸಬಲ್ಲ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿಯರು ಧೈರ್ಯ, ಆತ್ಮಸಾಕ್ಷಿ, ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸ್ಫೂರ್ತಿ ಮಹಿಳಾ ಅಧ್ಯಯನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ತುಮಕೂರಿನ ಬಿ.ಸಿ.ಪ್ರವೇಣಿ ಮಾತನಾಡಿ, ಮಹಿಳೆಯರ ಮೇಲಿನ ಅಮಾನವೀಯ ಕೃತ್ಯಗಳು ಹೆಚ್ಚುತ್ತಿದ್ದು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಡಿದು ನಿಲ್ಲಬೇಕು. ಮನೆ ಅಥವಾ ಹೊರಗೆ ತನ್ನ ಸುರಕ್ಷತೆ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ಲಲಿತಾ ಕೃಷ್ಣಮೂರ್ತಿ, ಸುಧಾ ವಾಸನ್, ಶೇಖಮ್ಮ, ಎಂ.ಎನ್.ಸೌಭಾಗ್ಯವತಿ ದೇವರು, ಸರ್ವಮಂಗಳಾ, ದುರ್ಗಾ, ಸುಚಿತ್ರಾ, ಸೌನ್ಯಾ, ಚಿತ್ರಾ ಶೆಟ್ಟಿಗಾರ್, ಶ್ರೀದೇವಿ, ಶೋಭಾ, ನಂದಿನಿ, ಗೀತಾ, ಸಂಧ್ಯಾ, ಪದ್ಮಾ, ಸಂಗೀತಾ, ಲಕ್ಷ್ಮಿ, ಉಮಾ, ಮಹೇಶ್ವರಿ, ಉಷಾ, ಅಮೃತಾ, ವೇದಾ, ವಿಜಯಲಕ್ಷ್ಮಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ರವೀಂದ್ರನಾಥ್,  ಕರಾಟೆ  ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ರಂಗಸ್ವಾಮಿ, ಹಾಗೂ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿನಿಯರು  ಪಾಲ್ಗೊಂಡಿದ್ದರು.

ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ತಾಲ್ಲೂಕು ಕಚೇರಿ ಆವರಣದಲ್ಲಿ   ವಿದ್ಯಾರ್ಥಿನಿ ಬಾನು ಅವರು ನಾಲ್ಕಾರು ಪುರುಷರು ಮೈಮೇಲೆ ಎರಗಿದಾಗ ಸಂರಕ್ಷಣೆಗೆ ಕರಾಟೆ ಕಲೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.