ADVERTISEMENT

ಮೊಳಕಾಲ್ಮುರು ಗಡಿಯಲ್ಲೂ ಆನೆ ಪ್ರತ್ಯಕ್ಷ?

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 7:41 IST
Last Updated 4 ಡಿಸೆಂಬರ್ 2017, 7:41 IST

ಮೊಳಕಾಲ್ಮುರು: ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಬೆಳಗುಪ್ಪ ಮಂಡಲದ ಅನಕನಹಾಳ್‌ ಗ್ರಾಮ ಹಾಗೂ ಮುರಡಿ ಗ್ರಾಮದಲ್ಲಿ ಆನೆಗಳ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ.

ಶನಿವಾರ ಬೆಳಗಿನ ಜಾವ ಅನಕನಹಾಳ್‌ನ ಹೊನ್ನೂರಪ್ಪ ಗಂಡಾನೆಗಳ ದಾಳಿಯಿಂದ ಮೃತಪಟ್ಟಿದ್ದರು. ಮೊಳಕಾಲ್ಮುರು ಗಡಿಯಲ್ಲಿನ ಮುರಡಿಯಲ್ಲಿ ಭಾನುವಾರ ರೈತ ಏಕಾಂತಪ್ಪ ಅವರನ್ನೂ ಬಲಿ ತೆಗೆದುಕೊಂಡಿವೆ.

ಇದರ ಬೆನ್ನಲ್ಲೇ ಮೊಳಕಾಲ್ಮುರು ತಾಲ್ಲೂಕಿನ ರಾಯದುರ್ಗ ಗಡಿಭಾಗದಲ್ಲಿ ಭಾನುವಾರ ಸಂಜೆ ಎರಡು ಗಂಡಾನೆಗಳು ಕಾಣಿಸಿಕೊಂಡಿವೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ.

ADVERTISEMENT

ಪಟ್ಟಣದಿಂದ ಆಂಧ್ರಪ್ರದೇಶದ ರಾಯದುರ್ಗಕ್ಕೆ ಹೋಗುವ ಮಾರ್ಗದಲ್ಲಿನ ಗಾಳಿ ಮಾರಮ್ಮನ ದೇವಸ್ಥಾನ ಸಮೀಪದ ಗುಡ್ಡದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಆನೆಗಳನ್ನು ನೋಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಹಶೀಲ್ದಾರ್‌ ಕೊಟ್ರೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗಡಿ ಗ್ರಾಮಗಳಾದ ಹುಚ್ಚಂಗಿದುರ್ಗ, ನಾಗಸಮುದ್ರ, ತಮ್ಮೇನಹಳ್ಳಿ, ಬಾಂಡ್ರಾವಿ ಅರಣ್ಯ ಪ್ರದೇಶ ದಾರಿಗಳು, ಪಟ್ಟಣ ಸುತ್ತಮುತ್ತ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಮಾಹಿತಿ ನೀಡಲಾಗಿದೆ. ಕತ್ತಲಾಗಿರುವುದರಿಂದ ಆನೆಗಳು ಬಂದಿರುವುದು ಇನ್ನೂ ಖಚಿತಗೊಂಡಿಲ್ಲ. ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.