ADVERTISEMENT

ಮೊಳಕಾಲ್ಮುರು: ಯೋಗೀಶ್‌ ಬಾಬುಗೆ ಕಾಂಗ್ರೆಸ್‌ ಟಿಕೆಟ್‌

ಎನ್‌ವೈಜಿಗೆ ‘ಕೈ’ ತಪ್ಪಿದ ಅವಕಾಶ; ಚಿತ್ರದುರ್ಗದಿಂದ ಹನುಮಲಿ ಷಣ್ಮುಖಪ್ಪ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 7:09 IST
Last Updated 16 ಏಪ್ರಿಲ್ 2018, 7:09 IST

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ದಿನಗಳಿಂದ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮೊಳಕಾಲ್ಮುರು ಕ್ಷೇತ್ರಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬುಗೆ ಟಿಕೆಟ್ ನೀಡಲಾಗಿದೆ. ಚಿತ್ರದುರ್ಗ ಕ್ಷೇತ್ರದಿಂದ ಹನುಮಲಿ ಷಣ್ಮುಖಪ್ಪ ಅವರನ್ನು ಕಣಕ್ಕಿಳಿಸಲಾ ಗಿದೆ. ನಿರೀಕ್ಷೆಯಂತೆ ಹೊಳಲ್ಕೆರೆಯಿಂದ ಸಚಿವ ಎಚ್. ಆಂಜನೇಯ, ಹಿರಿಯೂರಿನಿಂದ ಶಾಸಕ ಡಿ. ಸುಧಾಕರ್, ಚಳ್ಳಕೆರೆಯಿಂದ ಶಾಸಕ ಟಿ. ರಘುಮೂರ್ತಿ, ಹೊಸದುರ್ಗದಿಂದ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ಮೊಳಕಾಲ್ಮುರು ಕ್ಷೇತ್ರದಿಂದ ಕಣಕ್ಕಿಳಿಯಲು ವಿ.ಎಸ್. ಉಗ್ರಪ್ಪ, ಮಾಜಿ ಸಂಸದ ಶಶಿಕುಮಾರ್, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಎನ್. ವೈ.ಗೋಪಾಲಕೃಷ್ಣ, ಕರಣ್ ಬೋರಯ್ಯ ತೀವ್ರ ಹೋರಾಟ ನಡೆಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಬಾಬು ಅಂತಿಮವಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ADVERTISEMENT

ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ನಟಿ ಭಾವನಾ ಸೇರಿದಂತೆ 17ಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರು. ಸಚಿವ ಎಚ್. ಆಂಜನೇಯ ಹನುಮಲಿ ಷಣ್ಮುಖಪ್ಪ ಅವರಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದರು. ಸಂಸದ ಬಿ.ಎನ್. ಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ಬೆಂಬಲ ನೀಡಿದ್ದರಿಂದ ಷಣ್ಮುಖಪ್ಪ ಅವರಿಗೆ ಟಿಕೆಟ್ ಸಂದಿದೆ.

ಹೊಳಲ್ಕೆರೆ ಕ್ಷೇತ್ರದಿಂದ ಸಚಿವ ಆಂಜನೇಯ ಕಣಕ್ಕಿಳಿಯುವುದರ ಬಗ್ಗೆ ಆರಂಭದಿಂದಲೂ ಅನುಮಾನವಿತ್ತು. ಆದರೆ, ಟಿಕೆಟ್ ಘೋಷಣೆ ಮೂಲಕ ಅನುಮಾನಗಳಿಗೆ ತೆರೆಬಿತ್ತು.

ಬಿಜೆಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಹೊಸದುರ್ಗದಿಂದ ಗೂಳಿಹಟ್ಟಿ ಶೇಖರ್, ಮೊಳಕಾಲ್ಮುರಿನಿಂದ ಶ್ರೀರಾಮುಲು, ಚಿತ್ರದುರ್ಗದಿಂದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್‌ಗೆ ಟಿಕೆಟ್ ನೀಡಿದೆ. ಚಳ್ಳಕೆರೆ ಮತ್ತು ಹೊಳಲ್ಕೆರೆ ಕ್ಷೇತ್ರಕ್ಕೆ 2ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಬೇಕಿದೆ.

ಈ ಎರಡೂ ಪಕ್ಷಗಳಿಗೆ ಮುನ್ನವೇ ಜೆಡಿಎಸ್ ಪಕ್ಷದಿಂದ ಐದು ಕ್ಷೇತ್ರಗಳಿಗೂ ಟಿಕೆಟ್ ಘೋಷಿಸಿತ್ತು. ಚಿತ್ರದುರ್ಗದಿಂದ ಕೆ.ಸಿ.ವೀರೇಂದ್ರ, ಹಿರಿಯೂರಿನಿಂದ ಡಿ. ಯಶೋಧರ್, ಹೊಳಲ್ಕೆರೆಯಿಂದ ಶ್ರೀನಿವಾಸ ಗದ್ದಿಗೆ, ಚಳ್ಳಕೆರೆಯಿಂದ ರವೀಶ್ ಹಾಗೂ ಮೊಳಕಾಲ್ಮುರಿನಿಂದ ಎತ್ನಟ್ಟಿಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಹೊಸದುರ್ಗ ಟಿಕೆಟ್ ಘೋಷಣೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.