ADVERTISEMENT

ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ?

ಹೊಸದುರ್ಗ ಪುರಸಭೆ ಅಧ್ಯಕ್ಷ ಎಚ್‌.ಪಿ.ಉಮೇಶ್‌ ರಾಜೀನಾಮೆ, ನಾಳೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:55 IST
Last Updated 24 ಮಾರ್ಚ್ 2017, 5:55 IST
ಹೊಸದುರ್ಗದ ಪುರಸಭಾ ಕಾರ್ಯಾಲಯ.
ಹೊಸದುರ್ಗದ ಪುರಸಭಾ ಕಾರ್ಯಾಲಯ.   

ಹೊಸದುರ್ಗ: ಪಟ್ಟಣದ ಪುರಸಭೆ ಅಧ್ಯಕ್ಷ ಎಚ್‌.ಪಿ.ಉಮೇಶ್‌ ರಾಜೀನಾಮೆ ನೀಡಿದ್ದು, ನೂತನ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ  ಚರ್ಚೆ ಆರಂಭವಾಗಿದೆ.

ಪುರಸಭೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ 23 ಸ್ಥಾನಗಳಲ್ಲಿ ಕಾಂಗ್ರೆಸ್‌ 12 ಸ್ಥಾನದಲ್ಲಿ ಜಯ ಗಳಿಸಿ, ಪುರಸಭೆಯ ಆಡಳಿತವನ್ನು ವಶಕ್ಕೆ ತೆಗೆದುಕೊಂಡಿತ್ತು. ಬಿಎಸ್‌ಆರ್‌ ಕಾಂಗ್ರೆಸ್‌ ಹಾಗೂ ಕೆಜೆಪಿ ಒಂದು ಸ್ಥಾನ ಮತ್ತು 9 ಸ್ಥಾನಗಳಲ್ಲಿ ಆಯ್ಕೆಯಾಗಿದ್ದರು.

ಮೊದಲ ಅವಧಿಯಲ್ಲಿ 2ಎ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿ ದ್ದರಿಂದ ಯಶೋದಮ್ಮ ಒಂದೂವರೆ ವರ್ಷ ಹಾಗೂ ಷಾಯಿನಾಬಾನು ಹತ್ತು ತಿಂಗಳು ಅಧಿಕಾರ ನಡೆಸಿದ್ದರು. ಎರಡನೇ ಅವಧಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಸಿಕ್ಕಿದ್ದರಿಂದ ಅಧ್ಯಕ್ಷ ಗಾದಿಗೆ ಕಾಂಗ್ರೆಸ್‌ನ ಸದಸ್ಯರಾದ ಗೋ.ತಿಪ್ಪೇಶ್‌, ಎನ್‌.ವಜೀರ್‌, ಎಚ್‌.ಪಿ.ಉಮೇಶ್‌, ನಾಗರಾಜು ದಿವಾಕರ್‌, ವೆಂಕಟೇಶ್‌ ದಳವಾಯಿ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.

ಶಾಸಕ ಬಿ.ಜಿ.ಗೋವಿಂದಪ್ಪ  ಸೂಚನೆ ಮೇರೆಗೆ 10 ತಿಂಗಳ ಅವಧಿಗೆ ಎಚ್‌.ಪಿ.ಉಮೇಶ್‌ ಅವರನ್ನು ಅಧ್ಯಕ್ಷರನ್ನಾಗಿ ಕಳೆದ 2016 ಮಾರ್ಚ್‌ 11ರಂದು ಆಯ್ಕೆ ಮಾಡಲಾಯಿತ್ತು. ಷರತ್ತಿನಂತೆ ಎಚ್‌.ಪಿ.ಉಮೇಶ್‌ ಕಳೆದ ಫೆಬ್ರುವರಿ 23ರಂದು ರಾಜೀನಾಮೆ ನೀಡಿದ್ದಾರೆ. ತೆರವಾಗಿರುವ ಅಧ್ಯಕ್ಷ ಸ್ಥಾನ ಅಲಂಕರಿಸಲು ಸದಸ್ಯರಾದ ನಾಗರಾಜು ದಿವಾಕರ್‌, ಎನ್‌.ವಜೀರ್‌, ಹಿತೇಂದ್ರ ಕಸರತ್ತು ನಡೆಸುತ್ತಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಪಕ್ಷೇತರ ಸದಸ್ಯ ಕೆ.ವಿ.ಸ್ವಾಮಿ ಅಧ್ಯಕ್ಷ ಸ್ಥಾನ ಪಡೆಯಬೇಕೆಂದು ಸುಮಾರು ಮೂರು ತಿಂಗಳಿಂದ ಶಾಸಕರ ಬಳಿ ಲಾಬಿ ನಡೆಸುತ್ತಿದ್ದಾರೆ.

ಅಷ್ಟೆ ಅಲ್ಲದೆ ಕಳೆದ ಮಂಗಳವಾರ ರಾತ್ರಿ ಆಡಳಿತ ಪಕ್ಷದ ಕೆಲವು ಬಲಾಢ್ಯ ಸದಸ್ಯರನ್ನು ಕರೆದುಕೊಂಡು ಊಟಿ, ಮೈಸೂರಿನತ್ತ ಪ್ರವಾಸ ಬೆಳೆಸಿದ್ದಾರೆ.
ಸಾರ್ಟ್‌ ರಾಜಕಾರಣ  ಪುರಸಭೆಗೂ ಕಾಲಿಟ್ಟಿದೆ.

ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿರುವಾಗ ಸಾರ್ವಜನಿಕರ ಹಿತ ಕಾಪಾಡುವುದನ್ನು ಮರೆತು ಅಧಿಕಾರಕ್ಕಾಗಿ ಮೋಜು ಮಸ್ತಿಗೆ ಪ್ರವಾಸ ಕೈಗೊಂಡಿರುವುದು ಬೇಸರದ ಸಂಗತಿ. ಬಿ.ಜಿ.ಗೋವಿಂದಪ್ಪ ರೆಸಾರ್ಟ್‌ ರಾಜಕಾರಣಕ್ಕೆ ಉತ್ತೇಜನ ನೀಡಿ ರುವುದು ಸರಿಯಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷೇತರ ಸದಸ್ಯರಿಬ್ಬರು ದೂರಿದರು. ಅಧ್ಯಕ್ಷ ಸ್ಥಾನದ ಆಯ್ಕೆಗೆ ಮಾರ್ಚ್‌ 25ರಂದು ಶನಿವಾರ ಚುನಾವಣೆ ನಡೆಯಲಿದೆ.

ಅಂದು ಬೆಳಿಗ್ಗೆ 11ರ ಒಳಗೆ ನಾಮಪತ್ರ ಸಲ್ಲಿಸುವುದು. ಮಧ್ಯಾಹ್ನ 1 ಗಂಟೆ ಒಳಗೆ ಪರಿಶೀಲನೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಯಾದ ನಂತರದಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ತಾಲ್ಲೂಕು ಆಡಳಿತದ ಮೂಲಗಳು ತಿಳಿಸಿವೆ.
-ಎಸ್.ಸುರೇಶ್

*
ಅಧ್ಯಕ್ಷ ಸ್ಥಾನವನ್ನು ಯಾರೇ ಸಿಗಲಿ ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದರೆ ಒಳಿತು.
-ಕೆ.ಎನ್‌.ರಮೇಶ್‌,
ಎಐಟಿಯುಸಿ ಅಧ್ಯಕ್ಷ ಹೊಸದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.