ADVERTISEMENT

ಯೋಜನೆ ಪಡೆಯಲು ರೈತರೇ ಬರುತ್ತಿಲ್ಲ!

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:29 IST
Last Updated 12 ಜುಲೈ 2017, 5:29 IST

ಚಿತ್ರದುರ್ಗ: ಕೃಷಿ ಇಲಾಖೆಯ ಕೆಲವು ಯೋಜನೆಗಳ ಲಾಭ ಪಡೆದುಕೊಳ್ಳಲು ದೂರವಾಣಿ ಮೂಲಕ ರೈತರನ್ನು ಸಂಪರ್ಕಿಸಿದರೂ ಮುಂದೆ ಬರುತ್ತಿಲ್ಲ. ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವುದೇ ಅದಕ್ಕೆ ಕಾರಣ! ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷ ಆರ್.ಎನ್.ವೇಣುಗೋಪಾಲ್ ಕೃಷಿ ಇಲಾಖೆಯ ಪ್ರಗತಿಯ ಮಾಹಿತಿ ಕುರಿತು ಪ್ರಶ್ನಿಸಿದಾಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಈ ಮೇಲಿನಂತೆ ಉತ್ತರಿಸಿದರು.

ಇಲಾಖೆಯ ವಿವಿಧ ಸೌಲಭ್ಯ ಮತ್ತು ಕೃಷಿ ಪರಿಕರ ಪಡೆದುಕೊಳ್ಳಲು ಈ ಮುಂಚೆ ರೈತರು ಮುಗಿಬೀಳುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಅಂತಹ ವಾತಾವರಣವೇ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು.

ತಾಲ್ಲೂಕಿನಾದ್ಯಂತ ಜುಲೈ ಮೊದಲ ವಾರದೊಳಗೆ 182.5 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 125.2 ಮಿ.ಮೀ ಆಗಿದ್ದು, ಮಳೆ ಪ್ರಮಾಣ ಶೇ 31ರಷ್ಟು ಕಡಿಮೆಯಾಗಿದೆ. ಪರಿಣಾಮ ಈವರೆಗೆ ಬಿತ್ತನೆ ಆಗಬೇಕಿದ್ದ 64,830 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ಕೇವಲ 13,651 ಹೆಕ್ಟೇರ್‌ನಲ್ಲಿ ಶೇ 21ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ, ಕೃಷಿ ಚಟುವಟಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ADVERTISEMENT

ಆ.15ರವರೆಗೆ ಸಿರಿಧಾನ್ಯ ಬೆಳೆಗಳನ್ನು ಬಿತ್ತಲು ಕಾಲಾವಕಾಶ ಇದೆ. ಆರ್ಕ, ನವಣೆ, ಊದಲು, ಕೊರ್ಲೆ ಸೇರಿದಂತೆ ಇತರೆ ಬೆಳೆಗೆ ಒಂದು ಹೆಕ್ಟೇರ್‌ಗೆ ಒಂದು ಸಾವಿರದಂತೆ, 5 ಎಕರೆಗೆ 5 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಸಿರಿಧಾನ್ಯ ಬೆಳೆಯುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.

ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ದಾಸ್ತಾನಿದೆ. ಆದರೆ, ದಿನಕ್ಕೆ ಒಂದೆರೆಡು ಕ್ವಿಂಟಲ್ ಕೂಡ ಖರ್ಚಾಗುತ್ತಿಲ್ಲ. ಮಳೆ ಕೊರತೆಯಿಂದಾಗಿ ಬೇಡಿಕೆ ಇಲ್ಲ ಎಂದ ಅವರು, ಈಗಾಗಲೇ ಬಿತ್ತಿರುವ ಬೆಳೆಗಳು ಅಲ್ಲಲ್ಲಿ ಜೀವ ಹಿಡಿದುಕೊಂಡಿವೆ. ವಾರದೊಳಗೆ ಅಗತ್ಯ ಮಳೆ ಬಂದರೆ ಮಾತ್ರ ಪ್ರಸ್ತುತ ಒಣಗುವ ಹಂತದಲ್ಲಿ
ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಶಾಲೆಗಳಿಗೆ ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳ ಹಂಚಿಕೆ ಶೇ 84 ರಷ್ಟು ಪೂರ್ಣಗೊಂಡಿದೆ. 5 ಸಾವಿರ ಬೈಸಿಕಲ್ ಬಂದಿದ್ದು, ತಿಂಗಳೊಳಗಾಗಿ ವಿತರಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರವಿಶಂಕರರೆಡ್ಡಿ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಶೋಭಾ ನಾಗರಾಜ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಬಿ.ಬೋರಯ್ಯ, ಯೋಜನಾಧಿಕಾರಿ ಸಿ.ಡಿ.ಪ್ರಸನ್ನಕುಮಾರ್, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಮಳೆಗಾಗಿ ಪ್ರಾರ್ಥಿಸಿ
ಎಲ್ಲವನ್ನೂ ಬದಿಗಿಟ್ಟು ಮಳೆಗಾಗಿ ದೇವರನ್ನು ಪ್ರಾರ್ಥಿಸಿ. ಮುಂದಾದರೂ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಜನತೆಗೆ ಮತ್ತು ರೈತರಿಗೆ ಒಳಿತಾಗಲಿ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್ ಸಲಹೆ ನೀಡಿದರು.

* * 

ಆರ್‌ಟಿಇ ಕಾಯ್ದೆಯಡಿ 70 ಶಾಲೆಗಳಿಂದ 84 ಸೀಟುಗಳಿಗೆ ನಾಲ್ಕನೇ ಸುತ್ತಿನ ಲಾಟರಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ರವಿಶಂಕರ್ ರೆಡ್ಡಿ
ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.