ADVERTISEMENT

ವರ್ಷದೊಳಗೆ ಕುಸಿದ ರೈಲ್ವೆ ಅಂಡರ್ ಪಾಸ್ ಗೋಡೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:38 IST
Last Updated 11 ಸೆಪ್ಟೆಂಬರ್ 2017, 9:38 IST

ಚಿತ್ರದುರ್ಗ: ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಗೆ ತುರುವನೂರು ರಸ್ತೆಯ ರೈಲ್ವೆ ಅಂಡರ್‌ಪಾಸ್‌ನ ತಡೆಗೋಡೆ ಕುಸಿದುಬಿದ್ದಿದೆ. ಗೋಡೆಗೆ ಹೊದಿಸಿದ್ದ ಸಿಮೆಂಟ್ ಚಪ್ಪಡಿ ಹಾಗೂ ಮಣ್ಣು ಕಳಚಿಬಿದ್ದು ಅರ್ಧ ರಸ್ತೆಯನ್ನು ಆವರಿಸಿಕೊಂಡಿತ್ತು. ಚಿತ್ರದುರ್ಗದಿಂದ ತುರವನೂರು ಕಡೆಗೆ ಹೋಗುವ ಮಾರ್ಗದಲ್ಲಿ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು. ಪರಿಸ್ಥಿತಿ ತಿಳಿದ ರೈಲ್ವೆ ಇಲಾಖೆ, ತಕ್ಷಣ ಕುಸಿದ ಮಣ್ಣು ಮತ್ತು ಸಿಮೆಂಟ್ ಚಪ್ಪಡಿಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.

ಕಳೆದ ವರ್ಷ ಜೂನ್ ತಿಂಗಳಲ್ಲಿ ಈ ರೈಲ್ವೆ ಕೆಳ ಸೇತುವೆಯನ್ನು ನಾಗರಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದಾಗಿ ಒಂದು ವರ್ಷದಲ್ಲಿ ಗೋಡೆ ಕುಸಿದಿದೆ. ಈ ಘಟನೆ ವೀಕ್ಷಿಸಲು ಬಂದ ನಾಗರಿಕರು, ‘ಗೋಡೆಗೆ ಸರಿಯಾಗಿ ಕಬ್ಬಿಣವನ್ನೇ ಹಾಕಿಲ್ಲ. ಕ್ಯೂರಿಂಗೂ ಮಾಡಿದಂತೆ ಕಾಣುವುದಿಲ್ಲ. ಅದಕ್ಕೇ ಇಷ್ಟು ಬೇಗ ಕುಸಿದಿದೆ’ ಎಂದು ಮಾತನಾಡಿಕೊಳ್ಳುತ್ತಿದ್ದರು.

‘ರೈಲ್ವೆ ಅಂಡರ್‌ ಪಾಸ್‌ನ ನಾಲ್ಕು ಗೋಡೆಗಳೂ ಇಷ್ಟೇ ಕಳಪೆಯಾಗಿದ್ದು, ಅವು ಕೂಡ ಅಪಾಯದಲ್ಲಿವೆ’ ಎಂದೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಕೆಳ ಸೇತುವೆಗೆ ನಿರ್ಮಿಸಿರುವ 300 ಮೀಟರ್ ಸಿಮೆಂಟ್ ಕಾಂಕ್ರಿಟ್ ರಸ್ತೆ ಕಿತ್ತುಹೋಗಿದೆ. ರಸ್ತೆಗೆ ಹೊದಿಸಿದ್ದ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ.

ADVERTISEMENT

‘ಇವು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಮಾಡುತ್ತವೆ. ದೊಡ್ಡ ದೊಡ್ಡ ವಾಹನಗಳು ಹೇಗೋ ಸಾಗುತ್ತವೆ. ಆದರೆ, ದ್ವಿಚಕ್ರ ವಾಹನಗಳಿಗೆ ಮಾತ್ರ ತೀವ್ರ ತೊಂದರೆಯಾಗುತ್ತದೆ’ ಎಂದು ಬ್ಯಾಂಕ್ ಕಾಲೊನಿ ನಿವಾಸಿ ನಾಗರಾಜರೆಡ್ಡಿ ಆತಂಕ ವ್ಯಕ್ತಪಡಿಸುತ್ತಾರೆ. ‘ಈ ಕೆಳಸೇತುವೆ ಮಾಡಿದ ಮೇಲೆ ದೊಡ್ಡ ಮಳೆ ಬಂದಿರಲಿಲ್ಲ. ಬಂದಿದ್ದರೆ, ಆಗಲೇ ಗೋಡೆಗಳು ಕುಸಿಯುತ್ತಿದ್ದವು. ಇಡೀ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ’ ಎಂದು ರೆಡ್ಡಿ ವಿವರಿಸುತ್ತಾರೆ.

ಈ ಕೆಳಸೇತುವೆ ದಾರಿಯನ್ನು ಗೋನೂರು, ಬಚ್ಚಬೋರಹನಟ್ಟಿ, ಹಾಯ್ಕಲ್, ಬೆಳಗಟ್ಟ ತುರುವನೂರು, ನಾಯಕನಹಟ್ಟಿ ಭಾಗದ ನಾಗರಿಕರು ಹೆಚ್ಚು ಬಳಸುತ್ತಾರೆ. ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಇಲ್ಲೇ ಸಂಚರಿಸುತ್ತಾರೆ. ಹಾಗಾಗಿ ರೈಲ್ವೆ ಇಲಾಖೆಯವರು ಕೆಳಸೇತುವೆಯ ಗೋಡೆ ಮತ್ತು ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಬ್ಯಾಂಕ್ ಕಾಲೊನಿ ನಿವಾಸಿ ವಿಜಯಣ್ಣ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.