ADVERTISEMENT

ವಾರದ ಸಂತೆಗಿನ್ನು ಮಳೆ, ಬಿಸಿಲಿನಿಂದ ರಕ್ಷಣೆ!

ಚಿಕ್ಕಜಾಜೂರು: ಸ್ಥಳೀಯ ರೈತರಿಗೂ ಅನುಕೂಲ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:21 IST
Last Updated 18 ಏಪ್ರಿಲ್ 2017, 4:21 IST
ವಾರದ ಸಂತೆಗಿನ್ನು ಮಳೆ, ಬಿಸಿಲಿನಿಂದ ರಕ್ಷಣೆ!
ವಾರದ ಸಂತೆಗಿನ್ನು ಮಳೆ, ಬಿಸಿಲಿನಿಂದ ರಕ್ಷಣೆ!   
ಚಿಕ್ಕಜಾಜೂರು:‘ಸಂತೆ ಮೈದಾನದಲ್ಲಿ ವ್ಯಾಪಾರಿಗಳಿಗೆ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಆದಷ್ಟು ಬೇಗನೆ ಮಾಡಿಕೊಡಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಸಿ.ಮೋಹನ್ ಭರವಸೆ ನೀಡಿದರು.
 
ಇಲ್ಲಿನ ಚಿಕ್ಕಂದವಾಡಿ ರಸ್ತೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸುಸಜ್ಜಿತ ವಾರದ ಸಂತೆ ಮೈದಾನವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
 
‘ವ್ಯಾಪಾರಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಒಂದೇ ಕಡೆ ಹಾಕಿದರೆ ಗ್ರಾಮ ಪಂಚಾಯ್ತಿಯಿಂದ ಸ್ವಚ್ಛಗೊಳಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
 
ಸಂತೆ ನಡೆಯುವ ಪ್ರದೇಶದಲ್ಲಿ ಚಾವಣಿ ನಿರ್ಮಿಸಲಾಗಿದ್ದು, ಬಿಸಿಲು–ಮಳೆಯಿಂದ ರಕ್ಷಣೆ ಸಿಗಲಿದೆ. ಈ ಬಗ್ಗೆ ಮಾತನಾಡಿದ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು. 
 
‘ಹಿಂದಿನ ಸಂತೆ ಮೈದಾನದಲ್ಲಿ ಮಳೆ ಬಂದಾಗ ವ್ಯಾಪಾರಿಗಳಿಗೆ ತುಂಬ ನಷ್ಟವಾಗುತ್ತಿತ್ತು. ಈಗ ಅದರ ಭಯವಿಲ್ಲ. ಹಣ್ಣು, ತರಕಾರಿ, ಸಂಬಾರ ಪದಾರ್ಥಗಳ ಮಾರಾಟಕ್ಕೆ ಅನುಕೂಲ ಆಗಲಿದೆ’ ಎಂದು ಸಿದ್ದಪ್ಪ, ರುದ್ರಪ್ಪ, ತಿಮ್ಮೇಶ್‌, ಮಂಜುನಾಥ, ರಶೀದ್‌  ಹೇಳಿದರು.
 
‘ಹಳೆ ಸಂತೆ ಮೈದಾನ ವಸತಿ ಪ್ರದೇಶದಿಂದ ದೂರವಿತ್ತು. ಈಗ ಹತ್ತಿರವಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ಗ್ರಾಹಕರಾದ ಚಂದ್ರಶೇಖರ್‌, ವಿಜಯಮ್ಮ, ಅನ್ನಪೂರ್ಣಾ. 
 
ನೂಕು ನುಗ್ಗಲು: ದೂರದ ಊರುಗಳಿಂದ ಬಂದಿದ್ದ ವ್ಯಾಪಾರಿಗಳು ಭಾನುವಾರ ಸಂಜೆಯೇ ಸಂತೆ ಮೈದಾನಕ್ಕೆ ಬಂದು ಸ್ಥಳವನ್ನು ಹಿಡಿದರು. ಸೋಮವಾರ ಹೊಸದಾಗಿ ಬಂದವರು ಸ್ಥಳಕ್ಕಾಗಿ ಜಗಳವಾಡಿದ ಸನ್ನಿವೇಶಗಳೂ ಕಂಡವು.

ಇನ್ನೊಂದೆರಡು ವಾರಗಳಲ್ಲಿ ವ್ಯಾಪಾರ ಸಹಜ ಸ್ಥಿತಿಗೆ ಬರಲಿದೆ. ಅಲ್ಲಿಯವರೆಗೆ ವ್ಯಾಪಾರಿಗಳು ಸಹಕರಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಮನವಿ ಮಾಡಿದರು.
****
ಸಂತೆ ಮೈದಾನ ಹೀಗಿದೆ...
ಸಂತೆ ನಡೆಯುವ ಸ್ಥಳದಲ್ಲಿ ಸಿಮೆಂಟ್‌ನಿಂದ ಎತ್ತರವಾದ ಕಟ್ಟೆಯನ್ನು ಕಟ್ಟಲಾಗಿದೆ. ನಡುವೆ ಓಡಾಟಕ್ಕೆ ಕಾಂಕ್ರೀಟ್ ಪಥವನ್ನು ಮಾಡಲಾಗಿದ್ದು, ಎರಡೂ ಬದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಬಿದ್ದ ನೀರು ಚರಂಡಿ ಮೂಲಕ ಪಕ್ಕದ ಕೆರೆ ಸೇರಲಿದೆ.
 
ಕಬ್ಬಿಣದ ಕಂಬಗಳನ್ನು ಭದ್ರವಾಗಿ ಅಳವಡಿಸಿ, ಕಬ್ಬಿಣದ ಶೀಟ್‌ಗಳಿಂದ ಚಾವಣಿಯನ್ನು ಮುಚ್ಚಲಾಗಿದೆ. ಮೈದಾನದ ಸುತ್ತ ಆವರಣ ಗೋಡೆ ನಿರ್ಮಿಸಲಾಗಿದ್ದು, ಹೊರಗಡೆ ವಾಹನ ನಿಲುಗಡೆಗೆ ವಿಶಾಲವಾದ ಬಯಲು ಇದೆ.
***
ಹೊಸ ದರ ಇಷ್ಟಿದೆ...
‘ಗ್ರಾಮ ಪಂಚಾಯ್ತಿಯು ಏ.10ರಂದು ವಾರದ ಸಂತೆಯ ಹರಾಜು ಹಾಕಿದಾಗ ಸ್ಥಳೀಯವಾಗಿ ದಾಖಲೆಯ ಮೊತ್ತ ದೊರೆತಿದೆ. ಈ ಮೊದಲು ವಾರ್ಷಿಕ ಗರಿಷ್ಠ ₹ 1.20 ಲಕ್ಷಕ್ಕೆ ಹರಾಜು ಆಗುತ್ತಿತ್ತು’ ಎನ್ನುತ್ತಾರೆ ಹರಾಜು ಕೂಗಿದ ಪ್ರವೀಣ್‌ಕುಮಾರ್‌.

ಹೊಸ ದರ: ವ್ಯಾಪಾರಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ತರಕಾರಿ, ಕಿರಾಣಿ ವ್ಯಾಪಾರಿಗಳಿಗೆ ಪ್ರತಿ ವಾರಕ್ಕೆ ₹ 40, ಸೊಪ್ಪು, ಬೆಳ್ಳುಳ್ಳಿ, ಟೀ ಅಂಗಡಿ, ತಿಂಡಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ₹ 30 ಜಕಾತಿ ನಿಗದಿ ಪಡಿಸಲಾಗಿದೆ. ಹೊಸ ಸಂತೆ ಮೈದಾನದಲ್ಲಿ 125 ವ್ಯಾಪಾರಿಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.