ADVERTISEMENT

ವೈಭವದ ಕಂಚೀವರದರಾಜ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:31 IST
Last Updated 21 ಏಪ್ರಿಲ್ 2017, 5:31 IST

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚೀಪುರದ ಕಂಚಿವರದರಾಜ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನಡೆಯಿತು.ರಥೋತ್ಸವದ ಅಂಗವಾಗಿ ಕಳೆದ ಗುರುವಾರದಿಂದಲೂ ದೇಗುಲದಲ್ಲಿ ಅನೇಕ ಧಾರ್ಮಿಕ ಆಚರಣೆಗಳು ಶ್ರದ್ಧಾಭಕ್ತಿಯಿಂದ ನಡೆದವು. ಬುಧವಾರ ರಾತ್ರಿ ಚಿಕ್ಕಬ್ಯಾಲದಕೆರೆ ಕರಿಯಮ್ಮದೇವಿ ಕೂಡುಭೇಟಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಗುರುವಾರ ಬೆಳಗಿನ ಜಾವ ಹಸಿರು ತೋರಣ, ಬಣ್ಣ ಬಣ್ಣದ ಬಟ್ಟೆ, ದೊಡ್ಡ ಹೂ ಮಾಲೆ ಹಾಗೂ ಬಾವುಟಗಳಿಂದ ಸುಂದರವಾಗಿ ಅಲಂಕರಿಸಿದ್ದ ತೇರಿನ ಸುತ್ತ ಸಿಂಗಾರಗೊಂಡಿದ್ದ ಕಂಚೀವರದ ರಾಜಸ್ವಾಮಿ ಮೂರ್ತಿಯನ್ನು ಮೂರು ಸುತ್ತು ಸುತ್ತಿಸಿ ರಥದಲ್ಲಿ ಪ್ರತಿಷ್ಠಾಪಿಸ ಲಾಗಿತ್ತು. ಬಳಿಕ ಈಡುಗಾಯಿ ಸೇವೆ, ಬಲಿಅನ್ನ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮ ನಡೆದ ನಂತರ ಭಕ್ತರು ಶ್ರದ್ಧಾಭಕ್ತಿಯಿಂದ ತೇರನ್ನು ಎಳೆದರು. ‘ಕಂಚೀವರದರಾಜ ಸ್ವಾಮಿ ಗೋವಿಂದಾ... ಗೋವಿಂದಾ’ ಎಂಬ ಭಕ್ತರ ಘೋಷಣೆ ಮೊಳಗಿದವು.

ದುಡ್ಡಿನ ದೇವರೆಂದು ಪ್ರಸಿದ್ಧಿ: ರಾಜ್ಯದ ವಿವಿಧೆಡೆ ನಡೆಯುವ ರಥೋತ್ಸವಗಳಲ್ಲಿ ಭಕ್ತರು ತೇರಿಗೆ ಬಾಳೆಹಣ್ಣು ತೂರುವುದು ಸಾಮಾನ್ಯ. ಆದರೆ ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರು ಇಲ್ಲಿನ ರಥೋತ್ಸವಕ್ಕೆ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿ, ಹೊನ್ನಮಳೆಯಂತೆ ಕಂಚೀವರದರಾಜ ಸ್ವಾಮಿಗೆ ಲಕ್ಷಾಂತರ ಚಿಲ್ಲರೆ ದುಡ್ಡು ತೂರಿ ಹರಕೆ ಸಲ್ಲಿಸಿದರು. ಭಕ್ತರು ತೂರಿದ ಚಿಲ್ಲರೆ ದುಡ್ಡನ್ನು ಆರಿಸಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿತ್ತು.

ADVERTISEMENT

ಗಮನ ಸೆಳೆದ ಮುಳ್ಳಾವಿಗೆ: ರಥೋತ್ಸವದ ನಂತರ ನಡೆದ ಮುಳ್ಳಾವಿಗೆ ಪವಾಡ ಹಾಗೂ ಸೋಮದೇವರ ಕುಣಿತ ಭಕ್ತರ ಗಮನ ಸೆಳೆಯಿತು.  ರಾತ್ರಿ ಹಾಲು ಪಲ್ಲಕ್ಕಿ ಉತ್ಸವ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.