ADVERTISEMENT

ಶ್ರೀರಾಮುಲು ಸೋಲಿಸುವುದೇ ನನ್ನ ಗುರಿ

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಾಸಕ ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:33 IST
Last Updated 24 ಏಪ್ರಿಲ್ 2018, 9:33 IST

ಮೊಳಕಾಲ್ಮುರು: ಎಲ್ಲಿ ನೋಡಿದರೂ ಜನಸ್ತೋಮ, ಹೆಗಲ ಮೇಲೆ ಕರಿ ಕಂಬಳಿಗಳು, ಕೈಯಲ್ಲಿ ಬೆತ್ತಗಳು, ಇದರಲ್ಲಿ ಮುಖ್ಯವಾಗಿದ್ದವರು ಕೃಷಿಕರು, ಪಶುಪಾಲಕರು, ಕೃಷಿ ಮಹಿಳೆಯರು.ಶಾಸಕ ಎಸ್‌. ತಿಪ್ಪೇಸ್ವಾಮಿ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಸಮಯದಲ್ಲಿನ ಮ್ಯಾಸನಾಯಕ ಸಂಸ್ಕೃತಿಗಳ ಆಚರಣೆ ಇದು.

ಬಿಜೆಪಿ ಟಿಕೆಟ್‌ ತಪ್ಪಿದ ನಂತರ ನಾಯಕನಹಟ್ಟಿಯಲ್ಲಿ ನಡೆದ ಪ್ರತಿಭಟನೆಗಳ ಸಮಯದಲ್ಲಿ ‘ಮ್ಯಾಸನಾಯಕರ ವಿರೋಧ ಕಟ್ಟಿಕೊಂಡು ಹೇಗೆ ಬಿಜೆಪಿ ಚುನಾವಣೆ ಎದುರಿಸುತ್ತದೆ’ ಎಂದು ಮ್ಯಾಸಮಂಡಲಕ್ಕೆ ಸೇರಿರುವ ಹಿರೇಹಳ್ಳಿ ಕಟ್ಟೆಮನೆಯ ತಿಪ್ಪೇಸ್ವಾಮಿ ಬಹಿರಂಗ ಸವಾಲುಗಳನ್ನು ಹಾಕಿದ್ದರು. ಅದರ ಭಾಗವಾಗಿಯೇ ‘ಮ್ಯಾಸನಾಯಕರ ಪಡೆ’ ತೋರಿಸಿ ಶಕ್ತಿ ಪ್ರದರ್ಶನ ಮಾಡಿದರು.

ಮಧ್ಯಾಹ್ನ 12.30 ಗಂಟೆಗೆ ಹತ್ತಾರು ವಾಹನಗಳಲ್ಲಿ ಸಹಸ್ರಾರು ಅಭಿಮಾನಿಗಳ ಜತೆ ಬಂದ ತಿಪ್ಪೇಸ್ವಾಮಿ ನುಂಕಿಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮ್ಯಾಸನಾಯಕರ ಧಿರಿಸಿನಲ್ಲಿ ಎತ್ತಿನ ಗಾಡಿಯಲ್ಲಿ ರೋಡ್‌ಷೋ ನಡೆಸಿದರು.

ADVERTISEMENT

ಇದು ಶ್ರೀರಾಮುಲು, ಯಡಿಯೂರಪ್ಪ ನಡೆಸಿದ್ದ ರೋಡ್‌ಷೋಗೆ ತದ್ವಿರುದ್ಧವಾಗಿತ್ತು. ದಾರಿಯುದ್ದಕ್ಕೂ ಭಾಷಣದಲ್ಲಿ ‘ಚಿತ್ರದುರ್ಗ ಜಿಲ್ಲೆ ಮದಕರಿ ನಾಯಕನದ ಭದ್ರಕೋಟೆ’, ‘ಮಾತು ತಪ್ಪಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ’, ‘ಶ್ರೀರಾಮುಲು ಅವರನ್ನು ಅಧಿಕ ಮತಗಳಿಂದ ಸೋಲಿಸಿ ಕಳಿಸುವುದು ನನ್ನ ಗುರಿ’, ‘ಇದು ಇಡೀ ಮ್ಯಾಸಮಂಡಲದ ನಿರ್ಧಾರ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕ್ಷೇತ್ರದ ಚುನಾವಣಾ ಇತಿಹಾಸಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಇಷ್ಟೊಂದು ಅಬ್ಬರವಾಗಿ ನಾಮಪತ್ರ ಸಲ್ಲಿಸಿದ್ದು ಇದು ಪ್ರಥಮ ಎಂದು ನೆರೆದಿದ್ದವರು ಮಾತನಾಡಿಕೊಂಡರು. ಮುಂಜಾಗ್ರತೆಯಾಗಿ ಅಪಾರ ಗಡಿಭದ್ರತಾ ಪಡೆ ಹಾಗೂ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.