ADVERTISEMENT

‘ಸುಜ್ಞಾನ ಇದ್ದಲ್ಲಿ ಮೋಸ ನಡೆಯಲ್ಲ’

​ಪ್ರಜಾವಾಣಿ ವಾರ್ತೆ
Published 15 ಮೇ 2017, 4:49 IST
Last Updated 15 ಮೇ 2017, 4:49 IST
ಹೊಸದುರ್ಗ: ‘ಪರಧನ, ಸ್ಥಾನ, ಮಾನ, ಪ್ರಾಣವನ್ನು ಅಪಹರಣ ಹಾಗೂ ಅತಿಕ್ರಮಣ ಮಾಡುವವರು ಇಂದು ಹೆಚ್ಚಾಗುತ್ತಿದ್ದಾರೆ. ತ್ರಿಕಾಲ ಜ್ಞಾನ ಉಳ್ಳವರು ಇನ್ನೊಬ್ಬರ ಆಸ್ತಿ ಕಬಳಿಸು ವುದಿಲ್ಲ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.
 
ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಸುಜ್ಞಾನ ಸಂಗಮ ಹಾಗೂ ಬಸವ ಜಯಂತಿ ಕಾರ್ಯ ಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
 
‘ಬಸವಣ್ಣ ಮನೆ ಹಾಗೂ ಕುಲದೈವವಾಗಿ ಜಂಗಮ ದೈವವನ್ನು ಪೂಜಿಸುತ್ತಿದ್ದರು. ಜಂಗಮ ದೈವ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಸಮಾನತೆ, ಅರಿವು, ಶ್ರದ್ಧೆ, ದಾಸೋಹ ಇರುವಲ್ಲಿ ಜಗಮ ಇರುತ್ತದೆ. 20 ವರ್ಷಗಳಿಂದ ನಾವು ಶರಣ ಸಂಗಮ ಎಂಬ ಹಮ್ಮಿಕೊಂಡು ಬಸವಣ್ಣನ ತತ್ವ–ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದೇವೆ’ ಎಂದು ಹೇಳಿದರು. 
 
‘ದೇಶದಲ್ಲಿ ಅತಿಕ್ರಮಣ ಹೆಚ್ಚಾಗುತ್ತಿದೆ. ಹಲವು ಕಡೆ ಮುಖ್ಯ ರಸ್ತೆಗಳನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಲಾಗುತ್ತಿದೆ. ಸುಜ್ಞಾನ ಇರುವಲ್ಲಿ ಅತಿಕ್ರಮಣ, ಆಕ್ರಮಣ, ದುರಭಿಮಾನ, ಮೋಸ ಇರುವುದಿಲ್ಲ. ಬಸವಣ್ಣ ಇಂತಹ ಸುಜ್ಞಾನ  ಪಡೆದುಕೊಂಡಿದ್ದರು.

12ನೇ ಶತಮಾನದಲ್ಲಿ ಹದಿನೆಂಟು ಜಾತಿಯ ಸಂಘಟನೆಗೆ ಸಾಮಾಜಿಕ ಸಮಾನತೆ ಕಲ್ಪಿಸಿದ್ದರು. ಆದರೆ ಇಂದು ರಾಜಕೀಯಕ್ಕಾಗಿ ಜಾತಿ ಸಂಘಟನೆ ಮಾಡುತ್ತಿರುವುದು ವಿಷಾದನೀಯ’ ಎಂದು ಹೇಳಿದರು. 
 
‘12ನೇ ಶತಮಾನದಲ್ಲಿ ರಟ್ಟೆಯ ಚಳವಳಿ ನಡೆದಿತ್ತು. ಆದರೆ, ಇಂದು ಹೊಟ್ಟೆಯ ಚಳವಳಿ ಆಗುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.
 
ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಜಿ.ರಮೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಪುರಸಭೆ ಅಧ್ಯಕ್ಷ ಸ್ವಾಮಿ, ಸಾಹಿತಿ ಉಜ್ಜಿನಪ್ಪ, ಬಾಗೂರು ನಾಗರಾಜಪ್ಪ, ನಿವೃತ್ತ ಮುಖ್ಯಶಿಕ್ಷಕ ಓಂಕಾರಪ್ಪ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.