ADVERTISEMENT

ಹೊಳಲ್ಕೆರೆಯನ್ನು ಮಲೆನಾಡಾಗಿಸುವ ಕನಸು

ಅಳಗವಾಡಿ, ಸಿರಿಗೆರೆಯಲ್ಲಿ ಸಚಿವ ಎಚ್.ಆಂಜನೇಯ ಪ್ರಚಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:21 IST
Last Updated 23 ಏಪ್ರಿಲ್ 2018, 8:21 IST

ಚಿತ್ರದುರ್ಗ: ‘ಹೊಳಲ್ಕೆರೆ ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಅರೆಮಲೆನಾಡಾಗಿರುವ ಹೊಳಲ್ಕೆರೆ ಕ್ಷೇತ್ರವನ್ನು ಮಲೆನಾಡು ಮಾಡುವ ಕನಸು ಹೊಂದಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ತಾಲ್ಲೂಕಿನ ಭರಮಸಾಗರ ಸಮೀಪದ ಅಳಗವಾಡಿಯಲ್ಲಿ ಭಾನುವಾರ ಚುನಾವಣೆ ಪ್ರಚಾರದ ವೇಳೆ ಮಾತನಾಡಿದರು.ಭರಮಸಾಗರ ವ್ಯಾಪ್ತಿಯ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ₹ 250 ಕೋಟಿ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರ ಜೊತೆಗೆ ಸಾಸ್ವೆಹಳ್ಳಿ ಹನಿ ನೀರಾವರಿ ಯೋಜನೆಯ ₹ 210 ಕೋಟಿ ಯೋಜನೆಗೆ ನೀರಾವರಿ ನಿಗಮದ ಅನುಮೋದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಇನ್ನಷ್ಟು ಹಸಿರಾಗಲಿದೆ ಎಂದು ವಿವರಿಸಿದರು.

‘ನೀರಾವರಿ ಇಲ್ಲದೆ ಪರಿತಪಿಸುತ್ತಿರುವ ಕ್ಷೇತ್ರದ ರೈತರು ಮತ್ತು ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ನನ್ನ ಉದ್ದೇಶವಾಗಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮತ್ತೆ ನಿಮ್ಮ ಸಹಕಾರ ಬೇಕು’ ಎಂದು ಮನವಿ ಮಾಡಿದರು.

ADVERTISEMENT

ಎಲ್ಲ ವರ್ಗದ ಬಡ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಉಚಿತವಾಗಿ ಶಿಕ್ಷಣ ಕಲ್ಪಿಸಬೇಕೆಂದು ಕ್ಷೇತ್ರದಲ್ಲಿ ₹ 300 ಕೋಟಿ ವೆಚ್ಚದಲ್ಲಿ 20 ವಸತಿ ಸಹಿತ ಶಾಲೆಗಳನ್ನು ತೆರೆಯಲಾಗಿದೆ. ಇದರಿಂದ ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಅಳಗವಾಡಿ ನಂತರ ಸಿರಿಗೆರೆ ಗ್ರಾಮ ಪಂಚಾಯ್ತಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಸಚಿವರು ಪ್ರಚಾರ ಕಾರ್ಯ ಕೈಗೊಂಡರು. ಅಲ್ಲಿಂದ ಹೊಳಲ್ಕೆರೆ ತಾಲ್ಲೂಕಿನ ಶಿವಪುರ, ಮಲ್ಲಾಡಿಹಳ್ಳಿ, ರಾಮಗಿರಿ, ನುಲೇನೂರು, ಸಾಸಲು ಹಳ್ಳಿ, ಶಿವಗಂಗ ಮತ್ತು ಹೊಳಲ್ಕೆರೆ ಪಟ್ಟಣದಲ್ಲಿ ಪ್ರಚಾರ ನಡೆಸಿದರು.

ಸಚಿವರೊಂದಿಗೆ ಮುಖಂಡ ಶಿವಣ್ಣ, ರಾಜಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಗಂಗಾಧರ್, ಅಂಬಿಕಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಪರಮೇಶ್ವರಪ್ಪ, ತಿಪ್ಪಣ್ಣ, ಪಾರಜ್ಜಿ ಹನುಮಂತಪ್ಪ, ಪ್ರಕಾಶ್, ಪೋಸ್ಟ್ ರಾಜಪ್ಪ, ರಂಗಣ್ಣ, ಚಂದ್ರಣ್ಣ, ಕೋಟೇಶಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.