ADVERTISEMENT

ಶ್ರೀಗಂಧ ಕಳವು: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 13:59 IST
Last Updated 5 ಜುಲೈ 2018, 13:59 IST
ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮದಲ್ಲಿ ಶ್ರೀಗಂಧ ಕಡಿದು ಕಳ್ಳ ಸಾಗಾಣಿಕೆ ಮಾಡುವ ವೇಳೆ ಸಿಕ್ಕಿಬಿದ್ದ ಆರೋಪಿಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ
ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮದಲ್ಲಿ ಶ್ರೀಗಂಧ ಕಡಿದು ಕಳ್ಳ ಸಾಗಾಣಿಕೆ ಮಾಡುವ ವೇಳೆ ಸಿಕ್ಕಿಬಿದ್ದ ಆರೋಪಿಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ   

ಚಿತ್ರದುರ್ಗ: ಇಲ್ಲಿನ ಜೋಗಿಮಟ್ಟಿ ವನ್ಯಧಾಮದಲ್ಲಿ ಶ್ರೀಗಂಧ ಕಡಿದು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರ‍್ಮುಗಂ ಎಂಬಾತ ಅರಣ್ಯ ಇಲಾಖೆ ಸಿಬ್ಬಂದಿಯ ಬಲೆಗೆ ಬಿದ್ದಿದ್ದಾನೆ.

ಮೂಲತಃ ತಮಿಳುನಾಡಿನ ಆರ‍್ಮುಗಂ ಶಿವಮೊಗ್ಗದ ನಿವಾಸಿ. ಬಂಧಿತ ಆರೋಪಿಯಿಂದ ₹ 1 ಲಕ್ಷ ಮೌಲ್ಯದ 12 ಶ್ರೀಗಂಧದ ತುಂಡು, ಎರಡು ಕೊಡಲಿ, ಮಚ್ಚು, ಗರಗಸ ವಶಪಡಿಸಿಕೊಳ್ಳಲಾಗಿದೆ. 15 ದಿನಗಳ ಅಂತರದಲ್ಲಿ ಇಬ್ಬರು ಶ್ರೀಗಂಧ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಜಿ.ಎಸ್‌.ಸಂದೀಪಕುಮಾರ್‌ ತಿಳಿಸಿದರು.

‘ತಮಿಳುನಾಡು ತಂಡವೊಂದು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಮಾಡುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಅರಣ್ಯ ಪ್ರದೇಶದಲ್ಲಿ ನಿಗಾ ಇಡಲಾಗಿತ್ತು. ಈಚೆಗೆ ನಾಲ್ವರು ಕಡಿತಲೆಯಲ್ಲಿ ತೊಡಗಿದ್ದಾಗ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದರು. ಸಮೀಪಕ್ಕೆ ತೆರಳಿದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಈ ಪೈಕಿ ಸೆಲ್ವಿ ಎಂಬ ಮಹಿಳೆ ಸೆರೆಸಿಕ್ಕಿದ್ದಳು’ ಎಂದು ವಿವರಿಸಿದರು.

ADVERTISEMENT

‘ಕಡಿದಾದ ಅರಣ್ಯ ಪ್ರದೇಶದಲ್ಲಿ ಜನಸಂಚಾರ ವಿರಳ. ಇಂತಹ ಸ್ಥಳಗಳಲ್ಲಿ ಶ್ರೀಗಂಧ ಮರಗಳು ಸಾಕಷ್ಟಿವೆ. ಆಂಜನೇಯ ಕಲ್ಲು, ಚಿರತೆ ಕಲ್ಲು ಪ್ರದೇಶಗಳಲ್ಲಿ ಕಳ್ಳಸಾಗಣೆ ಮಾಡುವಲ್ಲಿ ತಂಡ ಸಕ್ರಿಯವಾಗಿತ್ತು. ಮುಳ್ಳಿನ ಪೊದೆಗಳಲ್ಲಿ ನುಗ್ಗಿ ತಪ್ಪಿಸಿಕೊಳ್ಳುವಲ್ಲಿ ಇವರು ನಿಪುಣರು. 2015ರಲ್ಲಿಯೂ ನಾಲ್ವರು ಆರೋಪಿಗಳು ಸೆರೆಸಿಕ್ಕಿದ್ದರು’ ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳಾದ ಪಿ.ಪ್ರದೀಪ್‌ ಕೇಸರಿ, ಎನ್.ಗುರುಮೂರ್ತಿ, ಅಂಜನಪ್ಪ, ಅನಿಶ್, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.