ADVERTISEMENT

‘ಅಡಿಗರು ಸಾಹಿತ್ಯಲೋಕದ ಮೇರು ಕವಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:19 IST
Last Updated 22 ಮಾರ್ಚ್ 2018, 12:19 IST

ಕಾಪು (ಪಡುಬಿದ್ರಿ): ಸಾಹಿತ್ಯ ಲೋಕ ದದ ಮೇರು ಕವಿಯಾಗಿ ಇಂದಿಗೂ ಜನಮನದಲ್ಲಿ ಕವಿ ಎಂ. ಗೋಪಾಲಕೃಷ್ಣ ಅಡಿಗರು ಶಾಶ್ವತವಾಗಿ ಉಳಿದಿದ್ದಾರೆ ಎಂದು ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶು ಪಾಲೆ ಚಂದ್ರಕಲಾ ನಂದಾವರ ಹೇಳಿದರು.

ಬುಧವಾರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ವತಿಯಿಂದ ಎಂ. ಗೋಪಾಲಕೃಷ್ಣ ಅಡಿಗ ಅವರ ಜನ್ಮಶತಮಾನೋತ್ಸವ ಆಚರಣೆ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತ ನಾಡಿ, ನವೋದಯ ಸಾಹಿತ್ಯದಲ್ಲಿ ಗುರುತಿ ಸಿಕೊಂಡಿರುವ ಅಡಿಗರು ನವ್ಯ ಪರಂಪರೆ ಪರಿವರ್ತನೆಗೆ ಕನ್ನಡ ಸಾಹಿತ್ಯದ ಸಾಧ್ಯತೆ ವಿಸ್ತರಿಸಿದ್ದಾರೆ ಎಂದರು.

ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕ ಮುರಳೀಧರ ಉಪಾಧ್ಯ ಮಾತನಾಡಿ, ಸಾಹಿತ್ಯ ಕ್ಷೇತ್ರದ ಬ್ರಾಡ್ಮನ್ ಆಗಿರುವ ಅಡಿಗರ ಕಾವ್ಯಗಳ ಬಗ್ಗೆ ಹೊಸ ತಲೆಮಾರಿನವರೂ ವಿಶೇಷ ಆಸಕ್ತಿ ವಹಿಸಿ ಅಧ್ಯಯನಶೀಲರಾಗುತ್ತಿರುವುದು ಪ್ರಶಂಸನೀಯ. ನವ್ಯ ಕಾಲದ ಪ್ರಾತಿನಿಧಿಕ ಕವಿಗಳಲ್ಲಿ ಒಬ್ಬರಾಗಿದ್ದು, ಎಲ್ಲರಿಗೂ ಮಾದರಿ ಎಂದರು.

ADVERTISEMENT

ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣೇಶ್ ಬಿಜೈ ಮಾತನಾಡಿ, ಅಡಿಗರು ಸಾಹಿತ್ಯದ ಮನಸ್ಸು ಹೊಸತನಕ್ಕೆ ಹೊರಳಿಸುವುದರ ಜತೆಗೆ, ಸಾಹಿತ್ಯದಿಂದಾಗಿ ಬದುಕು ರೂಪಿಸಿಕೊಳ್ಳುವ ಬಗೆಯನ್ನು ಇತರರಿಗೆ ತಿಳಿಸಿಕೊಟ್ಟಿದ್ದಾರೆ. ಆ ಮೂಲಕ ಸಾಹಿತ್ಯ ಕ್ಷೇತ್ರದ ಧ್ರುವತಾರೆಯಾಗಿ ಗುರುತಿಸಲ್ಪಟ್ಟಿದ್ದಾರೆ ಎಂದರು.

ಕಾರ್ಕಳ ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಅಡಿಗರ ಗದ್ಯ ಬರಹಗಳ ಕುರಿತಾಗಿ ಉಪನ್ಯಾಸ ನೀಡಿದರು. ಹೆಜಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕಿ ಸುಜಾತ ಬಿಜೈ, ಗಮಕ ಸಾಹಿತಿ ಕೋಟ ಶ್ರೀಕೃಷ್ಣ ಅಹಿತಾನಲ ಉಪಸ್ಥಿತರಿದ್ದರು.

ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕ ವೆಂಕಟೇಶಪ್ಪ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕಾರಿ ವಿದ್ಯಾ ಡಿ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.