ADVERTISEMENT

ಜಪಾನ್‌ ತಜ್ಞರಿಂದ ಅವಲೋಕನ

ಶಿರಾಡಿ ಹೆದ್ದಾರಿ – ಸುರಂಗ ಮಾರ್ಗ ಯೋಜನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 5:33 IST
Last Updated 25 ಅಕ್ಟೋಬರ್ 2014, 5:33 IST

ಮಂಗಳೂರು: ಶಿರಾಡಿ ಘಟ್ಟ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಜಪಾನ್‌ನ ಮೂವರು ತಜ್ಞರ ತಂಡ ಶುಕ್ರವಾರ ಇಲ್ಲಿ ಸಮಾಲೋಚನೆ ನಡೆಸಿತು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಧ್ಯಾಹ್ನ 1ರಿಂದ 3.45ರವರೆಗೆ ನಡೆದ ಸಭೆಯಲ್ಲಿ ಸಚಿವ ಅಭಯಚಂದ್ರ ಜೈನ್‌, ಶಾಸಕರಾದ ಜೆ.ಆರ್‌.ಲೋಬೊ, ಮೊಯಿದ್ದೀನ್‌ ಬಾವ,  ಮೇಯರ್‌ ಮಹಾಬಲ ಮಾರ್ಲ ಇತರರು ಇದ್ದರು.

ಶಿರಾಡಿ ಘಟ್ಟ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕುರಿತಂತೆ ಜಪಾನ್‌ ತಂಡ ಮಂಗಳೂರಿನಲ್ಲಿ ನಡೆಸಿದ ಪ್ರಥಮ ಸಭೆ ಇದು. ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ಸಭೆಗಳು ನಡೆಯಲಿವೆ. ಯೋಜನೆಯ ಆರ್ಥಿಕ ಸಾಧ್ಯತೆಗಳನ್ನು ಮೊದಲಾಗಿ ಕಂಡುಕೊಳ್ಳುವುದು ತಂಡದ ಉದ್ದೇಶವಾಗಿದೆ.

ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಎಷ್ಟು ವಾಹನಗಳ ಸಂಚರಿಸುತ್ತವೆ, ಯಾವ ಬಗೆಯ ಸರಕು ಸಾಗಣೆ ಆಗುತ್ತದೆ, ದಟ್ಟಣೆಯ ಸಮಯದಲ್ಲಿ ವಾಹನಗಳ ಪ್ರಮಾಣ ಎಷ್ಟು ಇರುತ್ತದೆ ಎಂಬಿತ್ಯಾದಿ ಹಲವಾರು ಮಾಹಿತಿಗಳನ್ನು ತಂಡ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಪಡೆಯಿತು.

ಜಪಾನ್‌ ತಂಡದಲ್ಲಿ ಭೂಸಾರಿಗೆ ಅಭಿವೃದ್ಧಿ ವಿಭಾಗದ ಮುಖ್ಯ ಎಂಜಿನಿಯರ್‌ ಒನೊ ಮಸಜುನಿ, ಸಿಟಿಐ ಎಂಜಿನಿಯರಿಂಗ್‌ ಕಂಪೆನಿಯ ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಉಪ ವ್ಯವಸ್ಥಾಪಕ ರುಯಿಚಿ ಒಯಿಕಾವ, ಭೂಸಾರಿಗೆ ಅಭಿವೃದ್ಧಿ ವಿಭಾಗದ ನಶಿರೀನ್‌ ಜಿ.ಸಿನರಿಂಬೊ ಹಾಗೂ ಇಂಡೊ ಜಪಾನೀಸ್‌ ಚೇಂಬರ್‌ ಆಫ್‌ ಕಾಮರ್ಸ್‌ ಆಂಡ್‌ ಇಂಡಸ್ಟ್ರಿಯ ಗೌರವ ಕಾರ್ಯದರ್ಶಿ ಪಿ.ಎನ್‌.ಕಾರಂತ ಇದ್ದರು.

ಪ್ರವಾಸೋದ್ಯಮ, ಕರಾವಳಿಯ ಆರ್ಥಿಕ ಚಟುವಟಿಕೆ ಸಹಿತ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಜಪಾನ್‌ ತಂಡ ಬಳಿಕ ಎನ್‌ಎಂಪಿಟಿಯ ಹಿರಿಯ ಅಧಿಕಾರಿಗಳ ಸಹಿತ ಹಲವರನ್ನು ಭೇಟಿ ಮಾಡಿತು. ತಂಡ ಬಳಿಕ ಬೆಂಗಳೂರಿಗೆ ತೆರಳಿತು.

ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ– ಆಶಯ
ಜಪಾನ್‌ನ ಈ ಸಾಧ್ಯತಾ ಅಧ್ಯಯನ ಪೂರ್ಣ­ಗೊಳ್ಳುವುದಕ್ಕೆ ಏನಿಲ್ಲವೆಂದರೂ ಎರಡು ವರ್ಷ ಬೇಕಾಗ­ಬಹುದು. ಆ ಬಳಿಕವಷ್ಟೇ ಯೋಜನೆಯನ್ನು ಕೈಗೆತ್ತಿಕೊಳ್ಳ­ಲಾಗುತ್ತದೆ. ಪಶ್ಚಿಮ ಘಟ್ಟಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಸುರಂಗ ಮತ್ತು ಫ್ಲೈಓವರ್‌ ಮಾದರಿಯಲ್ಲಿ ಹೆದ್ದಾರಿ ನಿರ್ಮಿಸುವುದು ಯೋಜನೆಯ ಸ್ಥೂಲ ಅಂಶ. ಇದು ಜಾರಿಗೆ ಬಂದರೆ ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಿ ಮಹತ್ವದ ಘಟ್ಟವೊಂದು ಪೂರೈಸಿದಂತಾಗಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ಪ್ರವಾಸೋದ್ಯಮ ಪರಿಣಿತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.